ಹನುಮಸಾಗರ ಸಮೀಪದ ಹಾಬಲಕಟ್ಟಿ ಗ್ರಾಮದ ಶ್ರೀ ಶರಣಬಸವೇಶ್ವರ ಮೂರ್ತಿ.
ಹನುಮಸಾಗರ: ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಮಾ.7ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾ.6ರಂದು ಉಡಿ ತುಂಬುವುದು, 7ರಂದು ಶ್ರೀ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಶ್ರೀ ಬಸವಲಿಂಗ ಶಿವಾಚಾರ್ಯರಿಂದ ಜಂಗಮ ವಟುಗಳಿಗೆ ಶಿವದಿಕ್ಷೆ ನಡೆಯಲಿದ್ದು, ಮಧ್ಯಾಹ್ನ ಸಾಮೂಹಿಕ ವಿವಾಹ ಜರುಗಲಿವೆ. ರಾತ್ರಿ ನಿಡಶೇಶಿ ಗೆಜ್ಜಿಭಾವಿ ಪಶ್ಚಕಂತಿ ಮಠದ ಅಭಿನವ ಕರಿಬಸವ ಶಿವಾಚಾರ್ಯರಿಂದ ಆಧ್ಯಾತ್ಮಿಕ ಪ್ರವಚನ, ಧಾರ್ಮಿಕ ಹಾರಿಕ ಮಂಜುನಾಥ ಅವರಿಂದ ಉಪನ್ಯಾಸ ನಡೆಯಲಿದೆ.
ಮಾ.8ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ 108 ಕುಂಭ, ಕಳಸ ಹಾಗೂ ಜನಪದ ವಾದ್ಯ ಮೇಳದೊಂದಿಗೆ ಶ್ರೀ ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ, ಸಂಜೆ ರಥೋತ್ಸವ ಹಾಗೂ ದೀಪೋತ್ಸವ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.