ಕೊಪ್ಪಳ ತಾಲೂಕಿನ ಮುನಿರಾಬಾದ್​ ಬಳಿ ಅಪಘಾತದಲ್ಲಿ ಗಾಯಗೊಂಡವರ ವಿವರ ಪಡೆದ ಬಳ್ಳಾರಿ ಸಂಸದ ಈ.ತುಕಾರಾಮ್​. ಎಸ್ಪಿಗಳಾದ ಎಸ್​.ಜಾಹ್ನವಿ, ಡಾ.ರಾಮ್​ ಎಲ್​.ಅರಸಿದ್ದಿ ಇದ್ದರು.  
ಕೊಪ್ಪಳ

ಟ್ರ್ಯಾಕ್ಟರ್​ ಉರುಳಿ ಏಳು ಜನ ದುರ್ಮರಣ

ಪ್ರಮುಖ ಮುಖ್ಯಾಂಶಗಳು

  • ಮುನಿರಾಬಾದ್​ ಬಳಿ ಭೀಕರ ಅಪಘಾತ
  • 13 ಜನರಿಗೆ ಗಂಭೀರ ಗಾಯ
  • ಹುಲಿಗಿ ಜಾತ್ರೆಗೆ ತೆರಳುತ್ತಿದ್ದ ಭಕ್ತರು
ಕೊಪ್ಪಳ : ತಾಲೂಕಿನ ಮುನಿರಾಬಾದ್​ ಬಳಿ ಟ್ಯಾಂಕರ್​ ಲಾರಿ ಡಿಕ್ಕಿ ಹೊಡೆದು ಟ್ರ್ಯಾಕ್ಟರ್​ಗೆ ಸೇತುವೆಯಿಂದ ಕೆಳಗೆ ಬಿದ್ದು ಒಂದು ವರ್ಷದ ಮಗು ಸೇರಿ ಒಂದೇ ಕುಟುಂಬದ ಆರು ಜನ ಶುಕ್ರವಾರ ದುರ್ಮರಣ ಹೊಂದಿದ್ದಾರೆ.
ಸಂಡೂರು ತಾಲೂಕಿನ ವಿವಿಧ ಗ್ರಾಮದವರಾದ 19 ಜನ ಸಂಬಂಧಿಗಳು ಟ್ರಾಕ್ಟರ್ನಲ್ಲಿ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆಗೆ ತೆರಳುತ್ತಿದ್ದರು. ಸೇತುವೆ ಬಳಿ ಬರುತ್ತಲೇ ಹಿಂದೆ ವೇಗವಾಗಿ ಬಂದ ಲಾರಿ ಬಲವಾಗಿ ಗುದ್ದಿದೆ. ರಭಸಕ್ಕೆ ಸೇತುವೆಯಿಂದ ಟ್ರಾಕ್ಟರ್​ ಕೆಳಗೆ ಉರುಳು ಬಿದ್ದಿದೆ. ಸಂಡೂರು ತಾಲೂಕಿನ ಮರ್ಲಾಯನಹಳ್ಳಿಯ ಟ್ರಾಕ್ಟರ್​ ಚಾಲಕ ಕೆಚ್ಚಪ್ಪ (43), ಅಂಕಮನಾಳ ಮಾಂತೇಶ (18), ಗೌರಮ್ಮ(40), ಕೂಡ್ಲಿಗಿಯ ಬೈರದೇವರಗುಡ್ಡದ ಗೀತಾ(25), ಭರತ್​(1) ಕೂಡ್ಲಿಗಿ ಮಂಜಮ್ಮ(25), ಮಾಯ (16) ಮೃತ ದುರ್ದೈವಿಗಳು.
13 ಜನರಿಗೆ ಗಾಯವಾಗಿದ್ದು, ನಾಲ್ವರನ್ನು ವಿಜಯನಗರ, 9 ಜನರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಜಯ್​ (22), ನಾಗರಾಜು (34), ಅರುಣಮ್ಮ (40) ಅವರ ಬೆನ್ನುಮೂಳೆ, ಸೊಂಟದ ಎಲುಬುಗಳು ಮುರಿದಿವೆ. ಸವಿತಾ (26) ಎರಡು ಭುಜದ ಮೂಳೆಗಳು ತುಂಡಾಗಿವೆ. ಮೃತ ಮಂಜಮ್ಮ ಪುತ್ರಿ ಅಂಜಲಿ (4) ಗಾಯಗೊಂಡಿದ್ದು ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ. ಚೇತನ್​(6), ರೇಣುಕಾ (40), ರತ್ನಮ್ಮ (37) ಗಾಯಗೊಂಡಿದ್ದು ಕೊಪ್ಪಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳಾದ ರೇಖಾ (14), ಅರ್ಜುನ (13), ರತಾ (14), ಮಹಾಲಕ್ಷ್ಮಿ (6) ವಿಜಯನಗರ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ತಲಾ 5 ಲಕ್ಷ ರೂ. ಪರಿಹಾರ

ಕೊಪ್ಪಳ-ವಿಜಯನಗರ ಗಡಿಯಲ್ಲಿ ಅಪಘಾತ ಸಂಭವಿಸಿದ್ದು, ವಿಜಯನಗರ ಡಿಸಿ ಕವಿತಾ ಎಸ್​.ಮನ್ನಿಕೇರಿ, ಬಳ್ಳಾರಿ ಐಜಿಪಿ ಡಾ.ಹರ್ಷ, ಕೊಪ್ಪಳ ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ವಿಜಯನಗರ ಎಸ್ಪಿ ಎಸ್​.ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ಮಾಹಿತಿ ಪಡೆದರು. ಬಳ್ಳಾರಿ ಸಂಸದ ಈ.ತುಕಾರಾಮ್​ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಸಿಎಂ ಜತೆ ಮಾತನಾಡಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾಗಿ ತಿಳಿಸಿದರು. ಗಾಯಾಳುಗಳಿಗೆ ಚಿಕಿತ್ಸೆ ಹಾಗೂ ವೈಯಕ್ತಿಕವಾಗಿ ಧನ ಸಹಾಯ ಮಾಡುವ ಭರವಸೆ ನೀಡಿದರು.

ಕಾಪಾಡದ ಹುಲಿಗೆಮ್ಮ

ದೇವರ ದರ್ಶನಕ್ಕೆಂದು ಸಂಬಂಧಿಗಳೆಲ್ಲ ಒಟ್ಟಾಗಿ ಖುಷಿಯಿಂದ ತೆರಳುತ್ತಿದ್ದರು. ಈ ವೇಳೆ ಅಪಘಾತವಾಗಿದ್ದು, ಆರು ಜನ ಮೃತಪಟ್ಟಿದ್ದನ್ನು ಕಂಡು ಮೃತರ ಸಂಬಂಧಿಗಳು ರೋಧಿಸಿದರು. ಮುನಿರಾಬಾದ್​ ಶವಾಗಾರದ ಮುಂದೆ ಎದೆಬಡಿದುಕೊಂಡು ಕಣ್ಣೀರು ಹಾಕಿದರು. ನಿನ್ನ ದರ್ಶನಕ್ಕೆಂದು ಬಂದವರನ್ನು ಕಾಪಾಡಲಿಲ್ಲವಲ್ಲ ಹುಲಿಗೆಮ್ಮ ಎಂದು ಆಡಿಕೊಂಡು ಅಳುತ್ತಿದ್ದ ದೃಶ್ಯ ಎಲ್ಲರನ್ನು ಮರುಗುವಂತೆ ಮಾಡಿತು. ಒಂದು ವರ್ಷದ ಬಾಲಕನೂ ಸಾವನ್ನಪ್ಪಿದ್ದು ಆತನ ತಂದೆ, ಹೆಂಡತಿ, ಮಗನನ್ನ ಕಳೆದುಕೊಂಡು ಮೃತ ಗೌರಮ್ಮನ ಗಂಡ ಮಲ್ಲೇಶ್​ ಹಾಗೂ ಮಗನ ರೋಧನೆ ನೋಡುಗರ ಕಣ್ಣಲ್ಲಿ ನೀರು ತರಿಸಿತು.