ತಾಲೂಕಿನ ಮುದ್ದಾಬಳ್ಳಿ ಗ್ರಾಮಸ್ಥರು ಮಳೆಗಾಗಿ ತಾಳ ಹಿಡಿದು ಭಜನೆ ಮಾಡುತ್ತ ಈಶ್ವರನಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಭಕ್ತರು. 
ಕೊಪ್ಪಳ

ಮಳೆಗಾಗಿ ದೇವರ ಮೊರೆ

ಪ್ರಮುಖ ಮುಖ್ಯಾಂಶಗಳು

  • ಮುದ್ದಾಬಳ್ಳಿಯಲ್ಲಿ ಏಳು ದಿನಗಳ ಸಪ್ತ ಭಜನೆ ಆರಂಭ
ಕೊಪ್ಪಳ : ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮಳೆಗಾಗಿ ವಿವಿಧ ರೀತಿಯ ಧಾರ್ಮಿಕ ಆಚರಣೆಗಳು ಆರಂಭಗೊಂಡಿವೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಗೂರ್ಜಿಯಾಟ, ಬಾಲ ಮಕ್ಕಳಿಂದ ದೇವಾಲಯಗಳಿಗೆ ನೀರು ಸಮರ್ಪಣೆ ಸೇರಿದಂತೆ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ. ಅದರ ಭಾಗವಾಗಿ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಬುಧವಾರದಿಂದ ಏಳು ದಿನಗಳ ನಿರಂತರ ಸಪ್ತ ಭಜನೆ ಆರಂಭಿಸಲಾಗಿದೆ.
ಜಿಲ್ಲೆಯಲ್ಲಿ ಶೇ. 50ರಷ್ಟು ಬಿತ್ತನೆ ಪೂರ್ಣಗೊಂಡಿದ್ದರೂ ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಸ್ಥಿತಿ ನಿಮಾರ್ಣವಾಗಿದೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡಿದ ರೈತರು ಆತಂಕಕ್ಕೊಳಗಾಗಿದ್ದು, ಉತ್ತಮ ಮಳೆಯಾಗಲೆಂದು ದೇವರ ಮೊರೆ ಹೋಗಿದ್ದಾರೆ.
ಮುದ್ದಾಬಳ್ಳಿಯ ಮುದ್ದಮ್ಮದೇವಿ ದೇವಸ್ಥಾನದಲ್ಲಿರುವ ಈಶ್ವರ ಮೂರ್ತಿ ಎದುರು ಹಗಲು-ರಾತ್ರಿ ಎನ್ನದೆ 24 ಗಂಟೆಗಳ ಕಾಲ ನಿರಂತರ ಶಿವನಾಮ ಸ್ಮರಣೆ ನಡೆಯುತ್ತಿದೆ. ಒಟ್ಟು 12 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ 6ರಿಂದ 8 ಮಂದಿ ಸದಸ್ಯರಿದ್ದಾರೆ. ಪ್ರತಿ ಮೂರು ಗಂಟೆಗೆ ತಂಡ ಬದಲಾಗುತ್ತಿದ್ದು, ತಾಳ ಹಿಡಿದು ಭಜನೆ ಮಾಡುತ್ತ ಈಶ್ವರನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಭಕ್ತರು ನಂದಿಕೇಶವನ ಸುತ್ತ ಪ್ರದಕ್ಷಿಣೆ ಹಾಕುತ್ತ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಈ ಭಜನೆಯಲ್ಲಿ ಯುವಕರು, ಹಿರಿಯರು ಹಾಗೂ ಬಾಲಕರೂ ಮಡಿಯಲ್ಲಿ ವ್ರತಾಚರಣೆ ಮಾಡಿ ಭಾಗವಹಿಸುತ್ತಿದ್ದಾರೆ. ಮಳೆಯ ಕೊರತೆ ಎದುರಾದಾಗ ಸಪ್ತ ಭಜನೆ ನಡೆಸಿದರೆ ಉತ್ತಮ ಮಳೆಯಾಗುತ್ತದೆ ಎಂಬುದು ಗ್ರಾಮದ ಜನರ ನಂಬಿಕೆಯಾಗಿದೆ.
ಗ್ರಾಮಸ್ಥರ ಪ್ರಕಾರ, 2012ರಲ್ಲಿ ಕೂಡ ಇದೇ ರೀತಿಯ ಬರ ಪರಿಸ್ಥಿತಿ ಎದುರಾದಾಗ ಹಿರಿಯರ ಸಲಹೆಯಂತೆ ಸಪ್ತ ಭಜನೆ ನಡೆಸಲಾಗಿತ್ತು. ಬಳಿಕ ಉತ್ತಮ ಮಳೆಯಾಗಿ ಬೆಳೆಗಳು ಉಳಿದಿದ್ದವು. ಆ ಅನುಭವದ ಹಿನ್ನೆಲೆಯಲ್ಲಿ ಈ ವರ್ಷವೂ ಸಪ್ತ ಭಜನೆ ಆಯೋಜಿಸಲಾಗಿದ್ದು, ದೇವರ ಕೃಪೆಯಿಂದ ಶೀಘ್ರದಲ್ಲೇ ಉತ್ತಮ ಮಳೆಯಾಗಲಿದೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.