- ನ್ಯಾ.ಮಹಾಂತೇಶ ಎಸ್.ದರದಗ ಸೂಚನೆ
ಕೊಪ್ಪಳ : ಮುಂಬರುವ ಮಾರ್ಚ್ 14ರಂದು ನಡೆವ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಎಲ್ಲ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಪರಿಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನುಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್.ದರಗದ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಕಾನೂನು ಸೇವಾ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸಾಕಷ್ಟು ಜನರಿಗೆ ಕಾನೂನು ಅರಿವೇ ಇಲ್ಲ. ನಾವು ಮಾಹಿತಿ ನೀಡುವ ಕೆಲಸ ಮಾಡಬೇಕು. ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ರಾಜಿ ಸಂಧಾನ ಮೂಲಕ ಪರಿಹರಿಸಿಕೊಳ್ಳಬಹುದು. ಮಾರ್ಚ್ 14ರಂದು ಅದಾಲತ್ ನಡೆಯಲಿದ್ದು, ಈ ಬಗ್ಗೆ ಜನರಿಗೆ ಅರಿವು ಮೂಡಿಸಿ. ನಗರಸಭೆ ವಾಹನಗಳು, ಬಸ್ ನಿಲ್ದಾಣಗಳಲ್ಲಿ ಪ್ರಚರುರಪಡಿಸಿ. ರಾಜಿ ಮೂಲಕ ಪ್ರಕರಣಗಳು ಇತ್ಯರ್ಥವಾದರೆ ಜನರ ಸಮಯ ಮತ್ತು ಅವರ ಸಂಬಂಧಗಳು ಉಳಿಯುತ್ತವೆ. ಈ ಸಲ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಿದ್ದು, ನಿಮ್ಮೆಲ್ಲರ ಸಹಕಾರ ಅವಶ್ಯ.
ಬಹುತೇಕ ಪ್ರಕರಣಗಳು ಸಂಬಂಧಿಗಳ ಆಸ್ತಿ ವಿಭಜನೆಗೆ ಸೇರಿರುತ್ತವೆ. ಮನೆಯಲ್ಲಿಯೇ ಕುಳಿತು ಪರಿಹರಿಸಿಕೊಳ್ಳಬಹುದು. ಆದರೆ, ನ್ಯಾಯಲಯಕ್ಕೆ ಬರುತ್ತಾರೆ. ಅಹಂಕಾರದಿಂದ ಬಹುತೇಕ ವಿಚ್ಛೇಧನ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುತ್ತವೆ. ಪರಸ್ಪರ ಹೊಂದಿಕೊಂಡರೆ ಸಮಸ್ಯೆ ಇರದು. ಎಲ್ಲರೂ ಅದಾಲತ್ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ತಹಸೀಲ್ದಾರ್ ಬಸವರಾಜ, ಪರಸರ ಇಲಾಖೆ ಅಧಿಕಾರಿ ವೈ.ಎಸ್.ಹರಿಶಂಕರ್, ಅಬಕಾರಿ ಅಧೀಕ್ಷಕ ಆಂಜನೇಯ, ವಾರ್ತಾಧಿಕಾರಿ ಡಾ.ಸುರೇಶ ಜಿ., ಕಾರ್ಮಿಕ ನಿರೀಕ್ಷಕಿ ಮಂಜುಳಾ ಇತರರಿದ್ದರು.