ಕನಕಗಿರಿಯಲ್ಲಿ ಶುಕ್ರವಾರ ಬೆಳಗಿನ ಜಾವ ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಂಗಡಿಯ ಬೀಗ ಮುರಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
ಸರಣಿ ಕಳ್ಳತನ ಸಿಸಿ ಕ್ಯಾಮರಾದಲ್ಲಿ ಸೆರೆ
ಕನಕಗಿರಿ: ತಾಲೂಕಿನ ಅರಳಹಳ್ಳಿಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣದಿಂದ ಬೆಚ್ಚಿಬಿದ್ದಿರುವ ಜನತೆಗೆ ಶುಕ್ರವಾರ ಬೆಳಗಿನ ಜಾವ ಪಟ್ಟಣದ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಅಂಗಡಿಗಳಿಗೆ ಮುಸುಕುಧಾರಿ ಕಳ್ಳರ ಗ್ಯಾಂಗ್ ನುಗ್ಗಿ ಸರಣಿ ಕಳ್ಳತನ ಮಾಡಿರುವುದು ಆತಂಕಕ್ಕೆ ದೂಡಿದೆ.
ಜ.28ರಂದು ಹಾಡಗಲೇ ಅರಳಹಳ್ಳಿಯ ದೊಡ್ಡಯ್ಯ ಗೊಂದಿ ಹೊಸ್ಸಳ್ಳಿ ಅವರ ಮನೆಯಲ್ಲಿ 5.57 ಲಕ್ಷ ರೂ. ನಗದು, 2 ಲಕ್ಷ ಬೆಲೆಯ ಚಿನ್ನಾಭರಣ ಕದಿಯಲಾಗಿತ್ತು. ಮರುದಿನ ಅಂದರೆ ಗುರುವಾರ ತಡರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವಾಹನದಲ್ಲಿ ಬಂದ ಕಳ್ಳರು, ಠಾಣೆ ಬಳಿಯ ಸೇವಾ ಕೇಂದ್ರ ಹಾಗೂ ನಿರ್ಲೂಟಿ ಕ್ರಾಸ್‌ನಲ್ಲಿನ ಬೇಕರಿಯೊಂದಕ್ಕೆ ನುಗ್ಗಿ ಕಬ್ಬಿಣದ ರಾಡುಗಳಿಂದ ಬೀಗ ಮುರಿದು ಹಣ ಕಳ್ಳತನ ಮಾಡಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಕೃತ್ಯ ನಡೆದಿದ್ದು, ಸೇವಾ ಕೇಂದ್ರದಲ್ಲಿ 1.5 ಲಕ್ಷ ರೂ. ಹಾಗೂ ಬೇಕರಿಯಲ್ಲಿದ್ದ 5 ಸಾವಿರ ರೂ., ಬಿಸ್ಕತ್ ಪ್ಯಾಕೆಟ್ ಹಾಗೂ ಕೂಲ್‌ಡ್ರಿಂಕ್ಸ್‌ನ ಖಾಲಿ ಬಾಟೆಲ್‌ಗಳನ್ನು ಹೊತ್ತೊಯ್ದಿದ್ದಾರೆ. ಇದರಿಂದ ಸಾರ್ವಜನಿಕರು ಭಯದಲ್ಲಿ ಬದುಕುವಂತಾಗಿದೆ.
ಅಂಗಡಿ ಹಾಗೂ ಸೇವಾಕೇಂದ್ರಗಳ ಸರಣಿಗಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿ ಟಿವಿ ದೃಶ್ಯಗಳನ್ನು ಪಡೆದಿದ್ದಾರೆ. ಆದರೆ, ಠಾಣೆಗೆ ಹೊಂದಿಕೊಂಡಿರುವ ಅಂಗಡಿಗಳ ಸರಣಿಕಳ್ಳತನ ಹಾಗೂ ಪಟ್ಟಣದ ಹಲವು ಕಡೆಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಹಾಕಿದ ಸಿಸಿ ಕ್ಯಾಮರಾಗಳ ಕಣ್ತಪ್ಪಿಸಿ ಕಳ್ಳತನ ಮಾಡಿರುವುದು ಆತಂಕಕ್ಕೆ ದಾರಿ ಮಾಡಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.