- 17,641 ಕುಟುಂಬಗಳಿಂದ ಭರ್ತಿ
- ಇಂದಿನಿಂದ ಮನೆ ಪಟ್ಟಿ
ಕೊಪ್ಪಳ : ಜಿಲ್ಲಾದ್ಯಂತ ಜನಗಣತಿ ಅಂಗವಾಗಿ ಏ.1ರಿಂದ 15ವರೆಗೆ ನಡೆದ ಸ್ವಯಂ ಗಣಿತಿಯಲ್ಲಿ ಜಿಲ್ಲೆಯ 17,641 ಕುಟುಂಬಗಳು ಸ್ವಯಂ ಪ್ರೇರಣೆಯಿಂದ ಮಾಹಿತಿ ಭರ್ತಿ ಮಾಡಿದ್ದಾರೆ. ಗಣತಿದಾರರಿಗೆ ಅಗತ್ಯ ತರಬೇತಿ ಪೂರ್ಣಗೊಳಿಸಿದ್ದು ಇಂದಿನಿಂದ ಮನೆ ಪಟ್ಟಿ ಹಾಗೂ ಗಣತಿ ಕಾರ್ಯ ಶುರುವಾಗಲಿದೆ.
ಏಪ್ರೀಲ್ 1ರಿಂದಲೇ ಗಣತಿಗೆ ಜಿಲ್ಲಾಡಳಿತ ಸಜ್ಜಾಗಿದೆ. ಗಣತಿದಾರರು, ಮೇಲ್ವಿಚಾರಕ ನೇಮಕಾತಿ, ತರಬೇತಿ ಪೂರ್ಣಗೊಂಡಿವೆ. ಸರ್ಕಾರ ಏ.15ವರೆಗೆ ಜನರೇ ಸ್ವಯಂ ಮಾಹಿತಿ ಒದಗಿಸಲು ಅವಕಾಶ ಮಾಡಿಕೊಟ್ಟಿತ್ತು. ಆನ್ಲೈನ್ ಲಿಂಕ್ ಬಳಸಿ ಬುಧವಾರ ಬೆಳಗ್ಗೆ 11 ಗಂಟೆ ವೇಳೆಗೆ 17,641 ಕುಟುಂಬಗಳು (ಶೇ.5.56) ಮಾಹಿತಿ ಒದಗಿಸಿವೆ. ಏ.16ರಿಂದ ಗಣತಿದಾರರು ತಮಗೆವಹಿಸಿಸ ಬ್ಲಾಕ್ ಮನೆ ಪಟ್ಟಿ ಮಾಡಿಕೊಂಡು ಗಣತಿ ಕಾರ್ಯ ನಡೆಸುವರು. ಸ್ವಯಂ ಘೋಷಣೆ ಮಾಡಿಕೊಂಡವರು ತಮಗೆ ಬಂದ ವಿಶೇಷ ಐಡಿ ಸಂಖ್ಯೆ ಗಣತಿದಾರರಿಗೆ ನೀಡಿದಲ್ಲಿ ಗಣತಿ ಕಾರ್ಯಕ್ಕೆ ನೆರವಾಗಲಿದೆ.
ಜಿಲ್ಲೆಯಲ್ಲಿ 3,17,514 ಮನೆಪಟ್ಟಿ ಮಾಡಲಾಗಿದೆ. ತಾಲೂಕುಗಳನ್ನು ನಗರ, ಗ್ರಾಮೀಣ ಪ್ರದೇಶವಾಗಿ ವಿಭಾಗಿಸಿ ಮನೆಗಳ ಪಟ್ಟಿ ಮಾಡಲಾಗಿದೆ. ಒಟ್ಟು 2,523 ಬ್ಲಾಕ್ಗಳನ್ನು ರಚಿಸಲಾಗಿದೆ. 2,783 ಗಣತಿದಾರರನ್ನು ನೇಮಿಸಿದ್ದು, ಶೇ.10ರಷ್ಟು ಹೆಚ್ಚುವರಿ ಸಿಬ್ಬಂದಿ ಕಾಯ್ದರಿಸಿಲಾಗಿದೆ. 470 ಸೂಪರ್ವೈಸರ್ಸ್ಗಳಿದ್ದು ಒಟ್ಟು 3,253 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಕಂದಾಯ, ಶಿಕ್ಷಣ, ನಗರ&ಸ್ಥಳಿಯ ಸಂಸ್ಥೆ ನೌಕರರನ್ನು ಗಣತಿಗೆ ನೇಮಿಸಿದೆ. ಈಗಾಗಲೇ ತರಬೇತಿ, ಮಾಹಿತಿ ನೀಡುವಿಕೆ, ವಿವರ ಭರ್ತಿ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಡಿಸಿ ಜಿಲ್ಲೆಗೆ ಪ್ರಧಾನ ಗಣತಿ ಅಧಿಕಾರಿ, ಜಿಪಂ ಸಿಇಒ ಅಪರ ಪ್ರಧಾನ ಅಧಿಕಾರಿ, ಎಡಿಸಿ ಜಿಲ್ಲಾ ಗಣತಿ ಅಧಿಕಾರಿ, ಎಸಿ ಉಪ ವಿಭಾಗೀಯ ಗಣತಿ ಅಧಿಕಾರಿ, ತಹಸೀಲ್ದಾರ್ಗಳು ಚಾರ್ಜ್ ಗಣತಿ ಅಧಿಕಾರಿಗಳು, ನಗರ, ಸ್ಥಳಿಯ ಸಂಸ್ಥೆಗಳ ಪೌರಾಯುಕ್ತರು/ಮುಖ್ಯಾಧಿಕಾರಿಗಳು ಆಯಾ ನಗರ&ಸ್ಥಳಿಯ ಸಂಸ್ಥೆ ವ್ಯಾಪ್ತಿಯ ಚಾರ್ಜ್ ಗಣತಿ ಅಧಿಕಾರಿಗಳಾಗಿ ನಿಯೋಜನೆಗೊಂಡಿದ್ದು ಮೇಲ್ವಿಚಾರಣೆ ನಡೆಸಲಿದ್ದಾರೆ.
ಸ್ವಯಂ ಘೋಷಣೆಯಲ್ಲಿ ಬುಧವಾರ ಬೆಳಗಿನ ಅವಧಿ ಮಾಹಿತಿಯಂತೆ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕುಟುಂಬಗಳು ಮಾಹಿತಿ ಒದಗಿಸಿ ಘೋಷಣೆ ಮಾಡಿಕೊಂಡಿದ್ದಾರೆ. ಒಟ್ಟು 2,98,536 ಕುಟುಂಬಗಳಲ್ಲಿ 49,873 (ಶೇ.16.71) ಮನೆ ಮಂದಿ ಸ್ವಯಂ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಕ್ರಮವಾಗಿ ದಣ ಕನ್ನಡ 88,244 (ಶೇ.15.56), ಬಾಗಲಕೋಟೆ 68,250 (ಶೇ.15.49), ವಿಜಯನಗರ 30,839(ಶೇ.10.69), ತುಮಕೂರು 80,124 (ಶೇ.10.26) ಕುಟುಂಬ ಘೋಷಣೆ ಮಾಡಿವೆ. ಕೊಪ್ಪಳ 10ನೇ ಸ್ಥಾನದಲ್ಲಿದೆ.
ಸ್ವಯಂ ಗಣತಿಗೆ ಏ.15ವರೆಗೆ ಅವಕಾಶ ನೀಡಲಾಗಿತ್ತು. ಜಿಲ್ಲೆಯಲ್ಲಿ 17,641 ಕುಟುಂಬಗಳು ಮಾಹಿತಿ ಒದಗಿಸಿವೆ. ಅವರಿಗೆಲ್ಲ 12 ಅಂಕಿಗಳ ಐಡಿ ಬರಲಿದ್ದು, ಅದನ್ನು ಸೇವ್ ಮಾಡಿಟ್ಟುಕೊಳ್ಳಬೇಕು. ಗಣತಿದಾರರು ಮನೆಗೆ ಬಂದಾಗ ಐಡಿ ನೀಡಿದಲ್ಲಿ ವಿವರ ಪರಿಶೀಲಿಸುವರು. ಏ.16ರಿಂದ ಮನೆ ಪಟ್ಟಿ, ಗಣತಿ ನಡೆಯಲಿದೆ. ಎಲ್ಲ ರೀತಿಯ ಸಿದ್ಧತೆ ಮಾಡಿದ್ದೇವೆ. ಮನೆಗೆ ಗಣತಿದಾರರು ಬಂದಾಗ ಜನರು ತಪ್ಪದೇ ಎಲ್ಲ ಮಾಹಿತಿ ಒದಗಿಸಬೇಕು.