ತಾವರಗೇರಾದಲ್ಲಿ ಆಯೋಜಿಸಿರುವ 371 (ಜೆ) ಕುರಿತು ಎರಡು ದಿನಗಳ ವಿಶೇಷ ಅಧ್ಯಯನ ಶಿಬಿರಕ್ಕೆ ಹಿರಿಯ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಶನಿವಾರ ಚಾಲನೆ ನೀಡಿದರು. ಪ್ರಮುಖರಾದ ರಾಘವೇಂದ್ರ ಕುಷ್ಟಗಿ, ಚಾಮರಸ ಮಾಲಿಪಾಟೀಲ್, ಡಾ.ರಜಾಕ್ ಉಸ್ತಾದ್, ಕೆ.ನೀಲಾ, ಜೆ.ವೀರಸಂಗಯ್ಯ, ನಜೀರಸಾಬ್ ಮೂಲಿಮನಿ, ಮಹೇಶ ಕಲಬುರಗಿ ಇದ್ದರು. 
ಕೊಪ್ಪಳ

ಸಮರ್ಪಕ ಜಾರಿಯಾಗದ 371(ಜೆ) ಕಲಂ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಕಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿಕೆ
  • ತಾವರಗೇರಾದಲ್ಲಿ ವಿಶೇಷ ಅಧ್ಯಯನ ಶಿಬಿರ

ಕುಷ್ಟಗಿ: 

ಕಲ್ಯಾಣ ಕರ್ನಾಟಕದ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬಂದಿರುವುದರ ಹಿಂದೆ ರಾಜಕೀಯ ಕುತಂತ್ರವಿದ್ದು, ಮೇಲ್ನೋಟಕ್ಕೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದೆ ಎಂದು ತೋರಿಸುವ ಹುನ್ನಾರವಾಗಿದೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಆರೋಪಿಸಿದರು.

ತಾವರಗೇರಾದ ಜಾರಕಿಹೊಳಿ ಫೌಂಡೇಷನ್ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿರುವ 371( ಜೆ) ಕಲಂ ಮತ್ತು ಕೆಕೆಆರ್‌ಡಿಬಿ ಕುರಿತ ಎರಡು ದಿನಗಳ ವಿಶೇಷ ಅಧ್ಯಯನ ಶಿಬಿರದಲ್ಲಿ ಶನಿವಾರ ಮಾತನಾಡಿದರು. 
ಕಕ ಭಾಗದಲ್ಲಿ 30 ಸಾವಿರ ಶಿಕ್ಷಕರ ಕೊರತೆ ಇದೆ. ಅಲ್ಲದೆ ಹತ್ತು ಸಾವಿರ ಇಂಗ್ಲಿಷ್, ಗಣಿತ ವಿಷಯ ಶಿಕ್ಷಕರ ಹುದ್ದೆ ಖಾಲಿ ಇದ್ದು, ಭರ್ತಿ ಮಾಡಿದರೆ ಬಡ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ, ಏಳು ಜಿಲ್ಲೆಯ ಶಾಸಕರು, ಸಂಸದರು, ಸಚಿವರು ಕಕ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. 371 (ಜೆ) ಕಲಂ ಸಮರ್ಪಕವಾಗಿ ಜಾರಿಯಾಗದೆ ಕಡತಕ್ಕೆ ಸೀಮಿತವಾಗಿದೆ. ಹೀಗಾಗಿ ಸೆ.17ರಂದು ಕಲಬುರಗಿಯ ಕೆಕೆಆರ್‌ಡಿಬಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಲು ಉದ್ದೇಶಿಸಲಾಗಿದೆ. ಆದ್ದರಿಂದ ಏಳು ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು, ಹೋರಾಟಗಾರರು,ಪ್ರಗತಿಪರ ಚಿಂತಕರು ಭಾಗವಹಿಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದರು. 
ಕಾರ್ಯಕ್ರಮ ಉದ್ಘಾಟಿಸಿದ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಮಾತನಾಡಿ, ಪ್ರಾದೇಶಿಕ ಅಸಮಾನತೆಯೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆಯಾದರೂ ಗುಣಮಟ್ಟದ ಶಿಕ್ಷಣ, ರಸ್ತೆ, ಕುಡಿವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಜಾತಿಯ ವ್ಯವಸ್ಥೆಯಲ್ಲಿ ಪ್ರಸ್ತುತ ಅತಿ ಶ್ರೀಮಂತರು ಒಂದೆಡೆ ಸೇರಿ ದೊಡ್ಡ ಜಾತಿಯನ್ನು ಕಟ್ಟಿಕೊಳ್ಳುವ ಆತಂಕವಿದೆ ಎಂದ ಅವರು, 371 (ಜೆ) ಕಲಂ ಜಾರಿ ಮಾಡಿದಾಗ ಇದ್ದ ತಾಂತ್ರಿಕ ತೊಂದರೆಗಳು ಮುಂದುವರಿದಿವೆ. ಕಾರಣ ನಾವು ಸಂಘಟಿತರಾಗಬೇಕಾದ ಕಾಲ ಸನ್ನಿಹಿತವಾಗಿದೆ. ಪ್ರತಿಯೊಬ್ಬರೂ ಪ್ರತಿಭಟಿಸುವ ಅಗತ್ಯವಿದೆ. ದೈವ ವಾದದಿಂದ ಸೈದ್ಧಾಂತಿಕ ವಾದದತ್ತ ನಾವೆಲ್ಲರೂ ಹೋಗಬೇಕು ಎಂದರು. 
ಶಶಿಧರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ನಾಲತವಾಡ ಮಾತನಾಡಿ, ಕಲ್ಯಾಣ ಕರ್ನಾಟಕದ ಅನುದಾನ ದುರ್ಬಳಕೆ ಆಗುಗುತ್ತಿದೆ. ಹಳೆಯ ಕಲ್ಲು ಹೊಸ ಬಿಲ್ ಎಂಬಂತಾಗಿದೆ. ಇದರಲ್ಲಿ ಪಾರದರ್ಶಕತೆ ಯಿಂದ ಕಲ್ಯಾಣ ಕರ್ನಾಟಕದ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಪ್ರಮುಖರಾದ ಪನ್ನರಾಜ ಬಳ್ಳಾರಿ, ಕೆ. ನೀಲಾ, ಲಕ್ಷ್ಮಣ ಗಸ್ತಿ, ಪಂಡಿತರಾವ್ ಚಿದ್ರಿ, ಡಾ.ರಜಾಕ್ ಉಸ್ತಾದ್, ಡಾ. ಶಾರದಾ ಹುಲಿ ನಾಯಕ, ಬಿ.ಬಸವರಾಜ ರಾಯಚೂರು, ಆರ್.ಕೆ. ದೇಸಾಯಿ, ಸಂತೋಷ ದೇಶಪಾಂಡೆ, ಮಾಧವ ರೆಡ್ಡಿ, ಶಿವಕುಮಾರ್, ಜೆ.ವೀರ ಸಂಗಯ್ಯ, ನಜೀರಸಾಬ್ ಮೂಲಿಮನಿ ಇತರರಿದ್ದರು.