ಖಾಸಗಿ ಕಾಲೇಜುಗಳ ಡೊನೇಷನ್ ಹಾವಳಿ ತಡೆಗೆ ಆಗ್ರಹಿಸಿ ಎಸ್‌ಎಫ್ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶಿರಸ್ತೇದಾರ್ ಕೃಷ್ಣವೇಣಿಗೆ ಶನಿವಾರ ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ಯು.ನಾಗರಾಜ, ಪದಾಧಿಕಾರಿಗಳಾದ ಬಸಯ್ಯ ಸ್ವಾಮಿ, ಸದಸ್ಯಗಳಾದ ದೊಡ್ಡ ಬಸವರಾಜ್, ಶರಣಬಸವ ವೆಂಕಣ್ಣ ಕಟ್ಟಿಮನಿ ಇದ್ದರು. 
ಕೊಪ್ಪಳ

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ರಹಸ್ಯ ಶುಲ್ಕ ವಸೂಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಎಸ್‌ಎಫ್ ತಾಲೂಕು ಸಮಿತಿ ಆರೋಪ
  • ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ
ಗಂಗಾವತಿ: ಡೊನೇಷನ್ ಮತ್ತು ಅನಗತ್ಯ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಪದವಿ ಮತ್ತು ವೃತ್ತಿ ಪರ ಕಾಲೇಜುಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಸ್‌ಎಫ್ ತಾಲೂಕು ಸಮಿತಿ ಸದಸ್ಯರು ತಾಲೂಕಾಡಳಿತ ಸೌಧದ ಮುಂದೆ ಶನಿವಾರ ವಿವಿಧ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಕೃಷ್ಣವೇಣಿಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಯು.ನಾಗರಾಜ ಮಾತನಾಡಿ, ಸಂವಿಧಾನದ ನಿಯಮ ಉಲ್ಲಂಘಿಸಿ ಎಲ್ಲ ಖಾಸಗಿ ಪದವಿ, ಪದವಿ ಪೂರ್ವ ಮತ್ತು ನರ್ಸಿಂಗ್ ಸೇರಿದಂತೆ ವೃತ್ತಿಪರ ಕಾಲೇಜುಗಳಲ್ಲಿ ಡೊನೇಷನ್ ನೆಪದಲ್ಲಿ ಶೋಷಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುತ್ತಿದ್ದಾರೆ. ಸರ್ಕಾರದ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಿವೆ. ಸಂಸ್ಥೆಗಳು ಉನ್ನತ ಶಿಕ್ಷಣ ಇಲಾಖೆ ಹಾಗೂ ಆಯಾ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ಅಧಿಕೃತ ಶುಲ್ಕದ ಮಿತಿ ಮೀರಿ, ವಿದ್ಯಾರ್ಥಿಗಳು ಮತ್ತವರ ಪಾಲಕರಿಂದ ಭಾರಿ ಪ್ರಮಾಣದ ಡೊನೇಷನ್ ಹಾಗೂ ರಹಸ್ಯ ಶುಲ್ಕಗಳನ್ನು ವಸೂಲಿ ಮಾಡುತ್ತಿವೆ.
ಬಾಕಿ ಶುಲ್ಕದ ನೆಪವೊಡ್ಡಿ ವಿದ್ಯಾರ್ಥಿಗಳನ್ನು ವರ್ಷದ ಆರಂಭದಲ್ಲೇ ಇಂಟರ್‌ನೆಟ್ ಪರೀಕ್ಷೆಗಳಿಂದ ಹೊರಗಿಡುವುದು, ಕೋರ್ಸ್ ಮುಗಿದರೂ ಒರಿಜಿನಲ್ ಅಂಕಪಟ್ಟಿಗಳನ್ನು ಒತ್ತೆಯಾಗಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವುದು ಹಾಗೂ ಕಾಲೇಜು ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಅವರ ಯೂನಿಫಾರ್ಮ್ ಸಮೇತ ಖಾಸಗಿ ಸಂಸ್ಥೆಗಳ ಅಡ್ಮಿಷನ್ ಪ್ರಚಾರಕ್ಕಾಗಿ ಬಲವಂತವಾಗಿ ರಸ್ತೆಗಿಳಿಸಿ ಸಂವಿಧಾನದ ವಿಧಿ 23 ಉಲ್ಲಂಘಿಸುತ್ತಿವೆ. ಸಂಬಂಧಪಟ್ಟ ಎಲ್ಲ ಇಲಾಖೆಗಳು ಜಂಟಿಯಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಹಠಾತ್ ತಪಾಸಣೆ ನಡೆಸಿ, ವಿದ್ಯಾರ್ಥಿಗಳ ಶೋಷಣೆ ತಡೆಗಟ್ಟುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಬಸಯ್ಯ ಸ್ವಾಮಿ, ಸದಸ್ಯಗಳಾದ ದೊಡ್ಡ ಬಸವರಾಜ್, ಶರಣಬಸವ ವೆಂಕಣ್ಣ ಕಟ್ಟಿಮನಿ, ರಾಕೇಶ್, ಆಲಂ ಬಾಷಾ, ಗಣೇಶ್ ಇತರರಿದ್ದರು.