- 2,479 ಶಿಕ್ಷಕರ ಹುದ್ದೆ ಖಾಲಿ
- ಶೇ.56.73ರಷ್ಟು ಪುಸ್ತಕ ಪೂರೈಕೆ
- 533 ಕೊಠಡಿಗಳಿಗಿಲ್ಲ ಅನುದಾನ
ಕೊಪ್ಪಳ: ಬೇಸಿಗೆ ರಜೆ ಕಳೆದಿದ್ದು ಎಂದಿನಂತೆ ಮೇ 29ರಿಂದ ಶಾಲಾರಂಭಕ್ಕೆ ಶಿಕ್ಷಣ ಇಲಾಖೆ ಸಜ್ಜುಗೊಂಡಿದೆ. ನೇಮಕಾತಿ ವಿಳಂಬ, ವರ್ಗಾವಣೆ ಕಾರಣ ಕಾಯಂ ಶಿಕ್ಷಕರ ಕೊರತೆ ಮುಂದುವರೆದಿದ್ದು, ಅಥಿತಿ ಶಿಕ್ಷಕರೇ ಪಠ್ಯ ಚಟುವಟಿಕೆಗಳಿಗೆ ಆಸರೆ ಎಂಬ ಸ್ಥಿತಿ ಮುಂದುವರೆದಿ. ಶಿಥಿಲ ಕೊಠಡಿಗಳ ಪುನಶ್ಚೇತನಕ್ಕೆ ಅನುದಾನ ಬರ ಎದುರಾಗಿದ್ದು ಕೊರತೆಗಳ ನಡುವೆ ಸಂಭ್ರಮದಿಂದ ಮಕ್ಕಳು ತರಗತಿಗಳಿಗೆ ಹಾಜರಾಗಬೇಕಿದೆ.
ಜಿಲ್ಲೆಯಲ್ಲಿ 928ಪ್ರಾಥಮಿಕ 211 ಪ್ರೌಢ ಶಾಲೆಗಳಿವೆ. 1,81,803 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಎಸ್ಸೆಸ್ಸೆಲ್ಸಿ ಲಿತಾಂಶ ಗಣನೀಯ ಏರಿಕೆಯಿಂದಿಗೆ ಸುಧಾರಣೆ ಕಂಡಿರುವುದು ಸಮಾಧಾನಕರ ಸಂಗತಿ. ಆದರೆ, ಕಾಯಂ ಶಿಕ್ಷಕರು, ಸುಸಜ್ಜಿತ ಕೊಠಡಿ, ಶೌಚಗೃಹ, ಕುಡಿವ ನೀರಿ ಇನ್ನಿತರ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ದುರ್ಲಬವಾಗುತ್ತಿವೆ. ಪ್ರತಿ ವರ್ಷ ಕೋಟ್ಯಂತರ ರೂ. ಅನುದಾನ ರ್ಖಚಾದರೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಲಭ್ಯವಾಗುತ್ತಿಲ್ಲ.
ಮುಖ್ಯವಾಗಿ ಕಾಯಂ ಶಿಕ್ಷಕರ ಕೊರತೆ ಶಿಕ್ಷಣ ಗುಣಮಟ್ಟ ತೀವ್ರ ಬಾಧಿಸುತ್ತಿದೆ. ಪ್ರಾಥಮಿಕ ವಿಭಾಗದಲ್ಲಿ 5,562 ಮಂಜೂರು ಹುದ್ದೆಗಳಿದ್ದು, 3,688 ಶಿಕ್ಷಕರು ನೇಮಕಗೊಂಡಿದ್ದಾರೆ. 1,874 ಸ್ಥಾನ ಖಾಲಿ ಇವೆ. ಇನ್ನು ಪ್ರೌಢ ವಿಭಾಗದಲ್ಲಿ 1,825 ಮಂಜೂರಾದ ಹುದ್ದೆಗಳ ಪೈಕಿ 1,220 ಟೀಚರ್ಸ್ ಕಾರ್ಯನಿರ್ವಹಿಸಿದರೆ, 605 ಸ್ಥಾನಗಳು ಖಾಲಿಯಾಗೇ ಉಳಿದಿವೆ. ನೇಮಕಾತಿಯಲ್ಲಿನ ವಿಳಂಬ ಹಾಗೂ ಶಿಕ್ಷಕರ ವರ್ಗಾವಣೆ ಕಾರಣ ಖಾಲಿ ಸ್ಥಾನಗಳ ಸಂಖ್ಯೆ ಹೆಚ್ಚುತ್ತಿದೆ. ಪರ್ಯಾಯವಾಗಿ ಅಥಿತಿ ಶಿಕ್ಷಕರನ್ನು ನೇಮಿಸಿಕೊಂಡು ಪಠ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಪರಿಪಾಠ ಮುಂದುವರೆದಿದೆ.
ಮತ್ತೊಂದೆಡೆ ಶೌಚಗೃಹ ಸಮಸ್ಯೆ ಸಾಮಾನ್ಯ ಮತ್ತು ನಿರಂತರ ಎಂಬಂತಾಗಿದೆ. ಪ್ರತಿ ಶಾಲೆಗೆ ತಲಾ ನಾಲ್ಕೆದು ಶೌಚಗೃಹಳಿದ್ದರೂ ಬಹುತೇಕ ಕಡೆ ನಿರ್ವಹಣೆ ದೇವರಿಗೆ ಪ್ರೀತಿ ಎಂಬಂತಿದೆ. ಡಿ ಗ್ರೂಪ್ ನೌಕರರ ನೇಮಕಾತಿ ಆಗದ ಕಾರಣ ಶಾಲಾ ಸ್ವಚ್ಛತೆ ಕಾಪಾಡುವುದು ಮುಖ್ಯ ಶಿಕ್ಷಕರಿಗೆ ಸವಾಲಾಗಿ ಪರಿಣಮಿಸಿದೆ. 4,556 ಶೌಚಗೃಹಗಳಲ್ಲಿ 1,000ಕ್ಕೂ ಹೆಚ್ಚು ನಿರುಪಯುಕ್ತವಾಗಿವೆ.
ಅರ್ಧದಷ್ಟು ಪುಸ್ತಕ ಲಭ್ಯ
ಮೇ 29ರಿಂದಲೇ ಶಾಲೆ ಆರಂಭಗೊಳ್ಳಲಿದ್ದು, ಈಗಾಗಲೇ ಸಮವಸ್ತ್ರ, ಪಠ್ಯಪುಸ್ತಕ ಪೂರೈಕೆಗೆ ಸರ್ಕಾರ ಚಾಲನೆ ನೀಡಿದೆ. ಆದರೆ, ಕಕ ಭಾಗದ ಜಿಲ್ಲೆಗಳಿಗೆ ಪೂರೈಸುವ ಟೆಂಡರ್ ಪ್ರಕ್ರಿಯೆ ವಿಳಂಬ ಕಾರಣ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಬಂದಿಲ್ಲ. ಶುಕ್ರವಾರದವರೆಗೆ ಶೇ.56.73ರಷ್ಟು ಬುಕ್ಸ್ ಬಂದಿವೆ. ಜಿಲ್ಲಾದ್ಯಂತ ಉಚಿತ ಮತ್ತು ಮಾರಾಟಕ್ಕೆ 27,82,704 ಪುಸ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 15,78,768 ಪುಸ್ತಕ ಬಂದಿದ್ದು ಆಯಾ ಶಾಲೆಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಇನ್ನು 1,36,346 ಜೊತೆ ಮೊದಲನೇ ಹಂತದ ಸಮವಸ್ತ್ರ ಪೂರೈಕೆಯಾಗಿದ್ದು, ಶಾಲೆಗಳಿಗೆ ಕಳಿಸಿಕೊಡಲಾಗುತ್ತಿದೆ.
533 ಶಿಥಿಲಗೊಂಡ ಕೊಠಡಿ
ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 664 ಹಾಗೂ ಪ್ರೌಢ ಶಾಲೆಗಳಲ್ಲಿ 273 ಕೊಠಡಿಗಳು ಒಟ್ಟು 937 ಬಳಕೆಗೆ ಯೋಗ್ಯವಿಲ್ಲ. ಈ ಪೈಕಿ 259 (ಪೆಮರಿ), 145 (ಹೈಸ್ಕೂಲ್) ಕಟ್ಟಡಗಳನ್ನು ದುರಸ್ಥಿಪಡಿಸಲಾಗಿದೆ. 2024ರಲ್ಲಿ 29 ಹೊಸ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ದೊರೆತಿದೆ. 2025ರಲ್ಲಿ 58 ಕೊಠಡಿಗಳ ನಿರ್ಮಾಣಕ್ಕೆ ಅನುಮತಿ ದೊರೆತಿದ್ದರೂ ಅನುದಾನ ಸಿಕ್ಕಿಲ್ಲ. ಇನ್ನು 533 ಕೊಠಡಿಗಳನ್ನು ರಿಪೇರಿ ಮಾಡಿಸುವುದು ಬಾಕಿ ಇದೆ. ಮುಖ್ಯವಾಗಿ ಗಂಗಾವತಿ ತಾಲೂಕಿನಲ್ಲಿ 186, ಯಲಬುರ್ಗಾ 154 ಮತ್ತು ಕುಷ್ಟಗಿ ತಾಲೂಕಿನಲ್ಲಿ 86 ಕೊಠಡಿಗಳ ರಿಪೇರಿ ಮಾಡಬೇಕಿದೆ.
ಸಿಲಿಂಡರ್ಗೆ ಬೇಡಿಕೆ ಸಲ್ಲಿಕೆ
ಬೆಲೆ ಏರಿಕೆ ಹಾಗೂ ಸಿಲಿಂಡರ್ ಪೂರೈಕೆ ಅಭಾವ ಬಿಸಿಯೂಟ ಬಾಧಿಸುವ ಬಗ್ಗೆ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಸಿಯೂಟ ಯೋಜನೆಗೆ ಅಗತ್ಯ ಇರುವಷ್ಟು ಸಿಲಿಂಡರ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಮನವಿ ಮಾಡಿದ್ದಾರೆ. ಈಗಾಗಲೇ ಶಿಕ್ಷಣ ಆಯುಕ್ತರು ಆಯಾ ಜಿಲ್ಲೆ ಡಿಸಿಗಳಿಗೆ ಪತ್ರ ಬರೆದಿದ್ದು, ಏಜೆನ್ಸಿಗಳಿಗೆ ಸೂಚನೆ ನೀಡಿ ಶಾಲೆ ಬೇಡಿಕೆ ಪಟ್ಟಿ ಪಡೆದು ಅದರ ಅನುಸಾರ ಗ್ಯಾಸ್ ಪೂರೈಸುವಂತೆ ನಿರ್ದೇಶಿಸಿದ್ದಾರೆ. ಆದ್ಯತೆ ಮೇರೆಗೆ ನೀಡುವಂತೆ ತಿಳಿಸಿದ್ದು, ಬಿಸಿಯೂಟ ಅಭಾದಿತವಾಗಲಿದೆ.
ಗ್ರಾಮೀಣ ಸೊಗಡು
ಮೇ 29ಕ್ಕೆ ಶಾಲೆ ಆರಂಭಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಗ್ರಾಮೀಣ ಸೊಗಡು ಮೂಡಿಸುವ ಮೂಲಕ ಮಕ್ಕಳನ್ನ ಬರಮಾಡಿಕೊಳ್ಳಲು ಸಿದ್ಧತ ನಡೆದಿವೆ. ತಳಿರು ತೋರಣ, ಎತ್ತಿನ ಬಂಡಿ, ಸಾಂಪ್ರದಾಯಿಕ ಉಡುಗೆ, ಪುಷ್ಪ ನೀಡುವ ಮೂಲಕ ಮಕ್ಕಳ ಸ್ವಾಗತ ಕೋರುವಿಕೆಗೆ ಉತ್ಸುಕವಾಗಿದೆ. ಮುಖ್ಯ ಶಿಕ್ಷಕರಿಗೆ ಈ ಬಗ್ಗೆ ನಿರ್ದೇಶನ ನೀಡಿದ್ದು, ಹಳ್ಳಿ ಸೊಬಗು ಸೃಷ್ಟಿಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಗುತ್ತಿದೆ.