ಸರ್ಕಾರಿ ಶಾಲೆ ಜಾಗ ಉಳಿವಿಗೆ ಒತ್ತಾಯಿಸಿ ಹೊಸಳ್ಳಿ ಗ್ರಾಮಸ್ಥರು ಮತ್ತು ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಎಸ್‌ಎ್ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ ಕಡಗದ್, ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ್, ಗ್ರಾಮಸ್ಥರಾದ ರಗಡಪ್ಪ, ಮಲ್ಲಿಕಾರ್ಜುನ ಹಗೇದಾಳ್, ಮಲ್ಲಪ್ಪ, ವೀರೇಶ ಸೋಮಲಾಪುರ ಇತರರಿದ್ದರು. 
ಕೊಪ್ಪಳ

ಸರ್ಕಾರಿ ಶಾಲೆ ಜಾಗ ಕಬಳಿಕೆಗೆ ಯತ್ನ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಭೂಮಿ ಉಳಿವಿಗೆ ಹೊಸಳ್ಳಿ ಗ್ರಾಮಸ್ಥರು-ಎಸ್‌ಎ್ಐ ತಾಲೂಕು ಸಮಿತಿ ಒತ್ತಾಯ
ಗಂಗಾವತಿ: ಸರ್ಕಾರಿ ಶಾಲೆ ಜಾಗ ಕಬಳಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ತಾಲೂಕಿನ ಹೊಸಳ್ಳಿ ಗ್ರಾಮಸ್ಥರು ಮತ್ತು ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮತ್ತು ಬಿಇಒ ಎಚ್.ಬಿ.ನಟೇಶ್‌ಗೆ ಮನವಿ ಸಲ್ಲಿಸಿದರು.
ಎಸ್‌ಎ್ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಹೊಸಳ್ಳಿಯಲ್ಲಿರುವ ಸ.ಹಿ.ಪ್ರಾ.ಶಾಲೆಗೆ ಕಲ್ಮಠದಿಂದ ಸ.ನಂ.16/2ರಲ್ಲಿನ 5 ಎಕರೆ ಭೂಮಿಯನ್ನು 30ವರ್ಷಗಳ ಹಿಂದೆ ನೀಡಿದ್ದು, ಶಾಲೆಯೂ ನಿರ್ಮಾಣವಾಗಿದೆ. ಇದರಲ್ಲಿ 3 ಎಕರೆ ಭೂಮಿಯನ್ನು ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ತಮ್ಮ ಹೆಸರಿಗೆ ನೋಂದಣಿಮಾಡಿಸಿಕೊಂಡಿದ್ದು, ಮಾರಾಟಕ್ಕೆ ಸಂಚು ನಡೆಸಿದ್ದಾರೆ. ಸರ್ಕಾರಿ ಶಾಲೆ ಹೆಸರಿನಲ್ಲಿರುವ ಜಾಗವನ್ನು ಕಲ್ಮಠಶ್ರೀಗಳ ಹೆಸರಿಗೆ ಬದಲಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದು, ಶಾಲೆಯ ಭೂಮಿ ಯಾವುದೇ ಕಾರಣಕ್ಕೂ ಇನ್ನೊಬ್ಬರ ಹೆಸರಿಗೆ ನೋಂದಣಿಗೆ ಆಗಲು ಬಿಡುವುದಿಲ್ಲ. ಈ ಬಗ್ಗೆ ಕಂದಾಯ ಮತ್ತು ಶಿಕ್ಷಣ ಇಲಾಖೆ ವಿಶೇಷ ಗಮನ ಹರಿಸಿ ಶಾಲೆ ಜಾಗ ಉಳಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥ ರಗಡಪ್ಪ ಹೊಸಳ್ಳಿ ಮಾತನಾಡಿ, ಹಲವು ವರ್ಷಗಳ ಹಿಂದೆ ಶಾಲೆಗೆ 5 ಎಕರೆ ಭೂಮಿಯಿದ್ದು, ಇತ್ತೀಚಿಗೆ 3 ಎಕರೆ ಭೂಮಿಯನ್ನು ಲಪಟಾಯಿಸಲು ಕಲ್ಮಠಶ್ರೀ ಹುನ್ನಾರ ನಡೆಸಿದ್ದಾರೆ. ವಿಚಾರಿಸಲು ಕಲ್ಮಠಕ್ಕೆ ಹೋದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಶಾಲೆ ಜಾಗವನ್ನು ಇನ್ನೊಬ್ಬರ ಹೆಸರಿಗೆ ಪರಭಾರೆ ಮಾಡಲು ಬಿಡುವುದಿಲ್ಲ ಎಂದರು.
ಎಸ್‌ಎ್ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ್, ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಗ್ರಾಮಸ್ಥರಾದ ಮಲ್ಲಿಕಾರ್ಜುನ ಹಗೇದಾಳ್, ಮಲ್ಲಪ್ಪ, ವೀರೇಶ ಸೋಮಲಾಪುರ, ಪಿ.ಸಿದ್ದಪ್ಪ, ವಿನೋದ, ಎಂ.ಶ್ರೀನಿವಾಸ, ಮಹೇಶ, ಚನ್ನಬಸವ, ಜಮಾಲ್‌ಸಾಬ್, ಸಿ.ಶಿವರಾಜ್ ಇತರರಿದ್ದರು.