ಗಂಗಾವತಿ ಕನಕಗಿರಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಕೆಆರ್‌ಟಿಸಿಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಜಾಗೆಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಪರಿಶೀಲಿಸಿದರು. ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು,ಬಿಜೆಪಿ ಮುಖಂಡರಾದ ಯಮನೂರ ಚೌಡ್ಕಿ, ವೀರೇಶ ಬಲ್ಕುಂದಿ ಇತರರಿದ್ದರು.
- ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿಕೆ
- ಜಾಗ ಪರಿಶೀಲನೆ
ಗಂಗಾವತಿ: ನಗರದ ಕನಕಗಿರಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಕೆಆರ್‌ಟಿಸಿಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಜಾಗೆಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಮಂಗಳವಾರ ಪರಿಶೀಲಿಸಿದರು.
ನಗರ ಬೆಳೆಯುತ್ತಿದ್ದು, 60 ವರ್ಷಗಳ ಹಿಂದೆ ನಿರ್ಮಿಸಿರುವ ನಗರದ ಮಧ್ಯಭಾಗದಲ್ಲಿರುವ ಬಸ್ ನಿಲ್ದಾಣ ಕಿರಿದಾಗಿದೆ. ನಿತ್ಯವೂ ಬಸ್‌ಗಳ ಸಂಚಾರ ಹೆಚ್ಚಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕನಕಗಿರಿ ರಸ್ತೆಯಲ್ಲಿ 5ಎಕರೆ ಜಾಗೆಯನ್ನು ಕೃಷಿ ವಿಜ್ಞಾನ ಕೇಂದ್ರದ ವ್ಯಾಪ್ತಿಯಲ್ಲಿ ಪಡೆದುಕೊಂಡಿದ್ದು, ಇತ್ತೀಚಿಗೆ ಆಯೋಜಿಸಿದ್ದ ವಿಶೇಷ ಸಂಪುಟ ಸಭೆಯಲ್ಲಿ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, 18 ಕೋ.ರೂ. ಅಡಳಿತಾತ್ಮಕ ಮಂಜೂರಾತಿ ಸಿಕ್ಕಿತ್ತು.
ಮೇ 2ರಂದು ಭೂಮಿ ಪೂಜೆ ನೆರವೇರಿಸುವ ಸಾಧ್ಯತೆಗಳಿದ್ದು, ಪೂರ್ವಭಾವಿಯಾಗಿ ಶಾಸಕ ಗಾಲಿ ಜನಾರ್ದನರೆಡ್ಡಿ ಜಾಗ ಪರಿಶೀಲಿಸಿ, ಗುತ್ತಿಗೆದಾರರಿಗೆ ಕೆಲವು ಸೂಚನೆಗಳನ್ನು ನೀಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈಟೆಕ್ ಮತ್ತು ಮಾದರಿ ನಿಲ್ದಾಣ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸುವ ಇಂಗಿತ ವ್ಯಕ್ತಪಡಿಸಿದರು.