ಸಂಕ್ರಾಂತಿ ಹಬ್ಬ ಅಂಗವಾಗಿ ಗುರುವಾರ ಕೊಪ್ಪಳ ತಾಲೂಕಿನ ಹುಲಿಗಿಯ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಜನರು.
- ಪುಣ್ಯಸ್ನಾನ ಮಾಡಿದ ಜನತೆ
- ಎಳ್ಳು-ಬೆಲ್ಲ ಹಂಚಿ ಆಚರಣೆ
ಕೊಪ್ಪಳ: ಪ್ರಕೃತಿ ಬದಲಾವಣೆಯೊಂದಿಗೆ ಮಿಳಿತಗೊಂಡಿರುವ ಸಂಕ್ರಾಂತಿ ಹಬ್ಬವನ್ನು ಗುರುವಾರ ಜಿಲ್ಲಾದ್ಯಂತ ಜನರು ಸಡಗರ, ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆಯಿಂದಲೇ ಜನರು ನದಿ ಅರಸಿ ತೆರಳಿದರು. ಕುಟುಂಬ ಸಮೇತ ಪುಣ್ಯ ಸ್ನಾನ ಮಾಡಿದರು. ದೇವರ ದರ್ಶನ ಪಡೆದು ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡು ಹಬ್ಬದ ಶುಭ ಕೋರಿದರು. ಹಬ್ಬ ಹಿನ್ನೆಲೆ ನಗರದ ವಿವಿಧ ದೇವಸ್ಥಾನಗಳಲ್ಲಿ ಎಂದಿಗಿಂತ ಹೆಚ್ಚು ಭಕ್ತರು ಕಂಡುಬಂದರು. ವಿಶೇಷ ಪೂಜೆ, ಅರ್ಚನೆ, ನೈವೇದ್ಯ ನೆರವೇರಿಸಲಾಯಿತು.
ಕೊಪ್ಪಳ ತಾಲೂಕಿನ ಹುಲಿಗಿಯ ಶಕ್ತಿ ದೇವತೆ ಹುಲಿಗೆಮ್ಮ ದೇವಸ್ಥಾನದಲ್ಲೂ ಭಕ್ತರ ದಂಡು ಕಂಡುಬಂತು. ಕೊಪ್ಪಳ, ಹೊಸಪೇಟೆ ಸೇರಿ ವಿವಿಧ ಜಿಲ್ಲೆಗಳಿಂದ ಜನರು ನದಿ ಸ್ನಾನಕ್ಕಾಗಿ ಆಗಮಿಸಿದರು. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಕಾರಣ ಡ್ಯಾಂನಲ್ಲಿ ನೀರು ಖಾಲಿ ಮಾಡಲಾಗಿದೆ. ಸದ್ಯ ಸಲ್ಪ ಪ್ರಮಾಣದ ನೀರು ಹರಿಯುತ್ತಿದ್ದು, ಅದರಲ್ಲೇ ಸಾರ್ವಜನಿಕರು ಮಿಂದೆದ್ದರು. ಸರತಿಯಲ್ಲಿ ನಿಂತು ದೇವಿ ದರ್ಶನ ಪಡೆದರು. ಬಳಿಕ ಬಯಲಿನಲ್ಲಿ ಕುಳಿತು ಕುಟುಂಬ ಸಮೇತ ಭೋಜನ ಮಾಡಿದರು.
ಗವಿಮಠವೂ ರಶ್: ಗವಿಸಿದ್ಧೇಶ್ವರ ಜಾತ್ರೆ ಹಾಗೂ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಗುರುವಾರ ನಿರೀೆಯಂತೆ ಗವಿಮಠಕ್ಕೆ ಹೆಚ್ಚಿನ ಭಕ್ತರು ಹರಿದು ಬಂದರು. ಗವಿಸಿದ್ಧೇಶ್ವರ ಕರ್ತೃ ಗದ್ದುಗೆ, ಅಭಿನವ ಗವಿಶ್ರೀಗಳ ದರ್ಶನ ಪಡೆದರು. ಬಳಿಕ ಮಹಾದಾಸೋಹದಲ್ಲಿ ಪ್ರಸಾದ ಸವಿದರು. ಜನರ ನಿಯಂತ್ರಣಕ್ಕಾಗಿ ಪ್ರತ್ಯೇಕ ಹೋಗಿ-ಬರುವ ಮಾರ್ಗ ಮಾಡಲಾಯಿತು. ವಾಹನಗಳ ದಟ್ಟಣೆ ತಡೆಗೆ ಪ್ರತ್ಯೇಕ ಪಾರ್ಕಿಂಗ್ ಜಾಗಗಳಲ್ಲಿ ನಿಲ್ಲಿಸುವಂತೆ ಪೊಲೀಸರು ಸೂಚಿಸಿದರು.