ಕೊಪ್ಪಳ ತಾಲೂಕಿನ ಹಿರೇಹಳ್ಳ ಬಳಿ ಸೋಮವಾರ ಮರಳುಗಾರಿಕೆ ನಡೆವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳ ತಂಡ 
ಕೊಪ್ಪಳ

ಜನರನ್ನು "ಮರಳು' ಮಾಡುತ್ತಿರುವ ಮಾಫಿಯಾ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ತಹಬದಿಗೆ ಅಧಿಕಾರಿಗಳ ಹೆಣಗಾಟ
  • ಟೆಂಡರ್​ ಪ್ರಕ್ರಿಯೆಗೆ ಉದ್ದೇಶಿತ ಗ್ರಹಣ ?
ವಿಶೇಷ ವರದಿ ಕೊಪ್ಪಳ
ಜಿಲ್ಲೆಯಲ್ಲಿ ಮರಳು ಮಾಫಿಯಾ ದಿನಕಳೆದಂತೆ ಬಿಗಡಾಯಿಸುತ್ತಿದೆ. ತೋರಿಕೆಗೆ ನಡೆವ ದಾಳಿಗಳು, ಭೇಟಿ, ಪ್ರಕರಣ ದಾಖಲು ಪ್ರಕ್ರಿಯೆ ಜನರನ್ನು "ಮರಳು' ಮಾಡುತ್ತಿದೆ. ಅಕ್ರಮ ತಡೆಗೆ ಹೊಸ ಬ್ಲಾಕ್​ ರಚಿಸಿ ತಹಬದಿಗೆ ತರುವ ಪ್ರಾಮಾಣಿಕ ಅಧಿಕಾರಿಗಳ ಯತ್ನಕ್ಕೆ ಕೆಳಹಂತದ ಅಧಿಕಾರಿಗಳು ಸೇರಿ ಜನಪ್ರತಿನಿಧಿಗಳ ಕೃಪಾಪೋಷಿತ ನಾಯಕರ ಕರಿನೆರಳು ಅಡ್ಡಿಯಾಗುತ್ತಿದೆ.
ತುಂಗಭದ್ರಾ ನದಿ, ಹಿರೇಹಳ್ಳ ಹಾಗೂ ಅದರ ಉಪ ಹಳ್ಳ&ಕೊಳ್ಳಗಳ ಮಡಿಲಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಹೊಂದಿಕೊಂಡಿರುವ ಹಿರೇಹಳ್ಳ, ಕುಕನೂರು ತಾಲೂಕಿನ ಕೆಲ ಗ್ರಾಮಗಳು, ಕೊಪ್ಪಳ ತಾಲೂಕಿನ ಕೆಲ ಗ್ರಾಮಗಳ ಮೂಲಕ ತುಂಗಭದ್ರಾ ನದಿ ಸೇರುತ್ತಿದೆ. ಇಲ್ಲೆಲ್ಲ ಅಕ್ರಮ ಮರಳುಗಾರಿಯೇ ಸಕ್ರಮ ಎಂಬಂತಾಗಿದೆ. ಕಾರಟಗಿ ತಾಲೂಕಿನ ನವಲಿ, ನಂದಿಹಳ್ಳಿ, ಕಕ್ಕರಗೋಳ ಇನ್ನಿತರ ಭಾಗಗಳಲ್ಲಿ ಹರಿವ ತುಂಗಭದ್ರಾ ನದಿ ಅಪಾರ ಮರಳಿನ ಆಗರವಾಗಿದೆ. ಉತ್ಕ್ರಷ್ಟ ಉಸುಕು ದೊರೆವ ಕಾರಣ ಬೇಡಿಕೆಯೂ ಹೆಚ್ಚಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬ್ಲಾಕ್​ ರಚಿಸಿ ಗಣಿಗಾರಿಕೆಗೆ ಅವಕಾಶ ನೀಡಿದೆ.
29 ಗ್ರಾಪಂ ವ್ಯಾಪ್ತಿ ಸಣ್ಣಪುಟ್ಟ ಹಳ್ಳಗಳಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದೆ. ಉಳಿದಂತೆ ಕೊಪ್ಪಳ ತಾಲೂಕಿನಲ್ಲಿ ಮೂರು, ಕಾರಟಗಿ&ಕನಕಗಿರಿ ತಾಲೂಕಿನಲ್ಲಿ ಮೂರು, ಯಲಬುರ್ಗಾ&ಕುಕನೂರು ವ್ಯಾಪ್ತಿಯಲ್ಲಿ ನಾಲ್ಕು, ಕುಷ್ಟಗಿಯಲ್ಲಿ ಎರಡು ಕಡೆ ಈ ಮೊದಲು ಬ್ಲಾಕ್​ ರಚಿಸಲಾಗಿತ್ತು. 29 ಪಟ್ಟಾ ಜಮೀನುಗಳಲ್ಲಿ ಮಂಜೂರಾತಿ ನೀಡಿದ್ದು, 13 ಸಕ್ರಿಯವಾಗಿದ್ದವು. ಹಿರೇಹಳ್ಳ ವ್ಯಾಪ್ತಿಯಲ್ಲಿ ಅಕ್ರಮ ದಿನ ಕಳೆದಂತೆ ಹೆಚ್ಚುತ್ತಿದ್ದು, ನಿಯಂತ್ರಣ ಅಸಾಧ್ಯ ಎಂಬಂತಾಗುತ್ತಿದೆ. ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿ ಬೋಟ್​ ತುಂಡರಿಸಿದ ಟನೆಗಳು ನಡೆದಿವೆ.
ತಾತ್ಕಾಲಿಕವಾಗಿ ಬ್ರೇಕ್​ ಬಿದ್ದಂತೆ ಕಂಡರೂ ಮತ್ತೆ ಅಕ್ರಮದ ಸದ್ದು ಪಿಸುಗುಟ್ಟುತ್ತಿದೆ. ಹೊಸದಾಗಿ 14 ಬ್ಲಾಕ್​ಗಳಿಗೆ ಟೆಂಡರ್​ ಪ್ರಕ್ರಿಯೆ ಆರಂಭವಾಗಿ ತಿಂಗಳುಗಳೇ ಆದರೂ ಸಲೀಸಾಗಿ ಮುಗಿವ ಲಕ್ಷಣಗಳು ಗೋಚರಿಸುತ್ತಿಲ್ಲ. ಈಗಾಗಲೇ ಎರಡು ಬಾರಿ ಟೆಂಡರ್​ ಪ್ರಕ್ರಿಯೆ ನಡೆದಿದ್ದು ಪೂರ್ಣಗೊಳ್ಳುತ್ತಿಲ್ಲ. ಅಷ್ಟೊಂದು ಬೇಡಿಕೆ ಇದ್ದರೂ ಕೊಪ್ಪಳ ತಾಲೂಕಿನ ಬ್ಲಾಕ್​ಗಳಿಗೆ ಯಾರೋಬ್ಬರೂ ಗುತ್ತಿಗೆಗೆ ಅರ್ಜಿ ಸಲ್ಲಿಸುತ್ತಿಲ್ಲವೆಂಬುದೇ ಸೋಜಿಗದ ಸಂಗತಿ ! ನಿಯಮಾನುಸಾರ ಒಬ್ಬರಿಗಿಂತ ಹೆಚ್ಚು ಜನ ಟೆಂಡರ್​ನಲ್ಲಿ ಭಾಗಿಯಾದರೆ ಕಡಿಮೆ ದರ ಬಿಡ್​ ಮಾಡಿದವರಿಗೆ ಬ್ಲಾಕ್​ ಹಂಚಿಕೆ ಆಗಲಿದೆ. ಈ ಪ್ರಕ್ರಿಯೆಯೇ ಕಗ್ಗಂಟಾಗಿದೆ.

ಅವರನ್ನ ಬಿಟ್ಟು ಇವರ್ಯಾರು ?

ರಾಜ್ಯಮಟ್ಟದಲ್ಲಿ ಜಿಲ್ಲೆಯ ಮಾನ ಹರಾಜು ಹಾಕುತ್ತಿರುವ ಉಸುಕು ಅಕ್ರಮಕ್ಕೆ ಯಾರ ಕೃಪಾಶೀರ್ವಾದವಿದೆ ಎಂಬುದು ಜಿಲ್ಲೆಯ ಸಾಮಾನ್ಯರಿಗೂ ಅರಿವಿದೆ. ಆದರೂ ಅಧಿಕಾರಿಗಳು ಅಕ್ರಮ ನಡೆಯುತ್ತಿಲ್ಲ. ಎಲ್ಲ ಸಲೀಸಾಗಿದೆ ಎಂದು ಹೇಳುತ್ತಾರೆ. ಒತ್ತಡ ಹೆಚ್ಚಿದಾಗ ಪ್ರಕರಣ ದಾಖಲಿಸುವುದು, ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ೋಟೋ ತೆಗೆದುಕೊಂಡು ಏನೂ ಆಗುತ್ತಿಲ್ಲವೆಂದು ಕೈ ತೊಳೆದುಕೊಳ್ಳುತ್ತಿದ್ದಾರೆ. ವಿಪಕ್ಷದವರೂ ಸಾಂಪ್ರದಾಯಿಕ ವಿರೋಧತ್ವ ಪ್ರದರ್ಶನಕ್ಕೆ ಸೀಮಿತರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸರು, ಮಾಧ್ಯಮಗಳನ್ನು ಒಳಗೊಂಡು ಎಲ್ಲರನ್ನು ಶ್ರೀಸಾಮಾನ್ಯ ಹಳದಿಗಣ್ಣಿನಿಂದ ನೋಡುವಂತಾಗಿದೆ. ಒಟ್ಟಾರೆ ಅಕ್ರಮಕೂಟದಲ್ಲಿ ಇದ್ದ ನಾಲ್ವರಲ್ಲಿ ಅವರನ್ನು ಬಿಟ್ಟು, ಇವರನ್ನು ಬಿಟ್ಟು ಕದ್ದವ್ಯಾರು ? ಎಂಬ ಎಲ್ಲರ ಪ್ರಶ್ನೆಗೆ "ನಿಮಗೆ ಗೊತ್ತಿಲ್ಲದ್ದು ಏನಿದೆ ?'ಎಂಬುದೇ ಸದ್ಯದ ಉತ್ತರವಾಗಿದೆ.

ಅಧಿಕಾರಿಗಳ ಕಳ್ಳಾಟ

ಅಕ್ರಮ ತಡೆದು ತಹಬದಿಗೆ ತರಬೇಕಾದ ಜವಾಬ್ದಾರಿ ಹೊತ್ತ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳಿಗಿಂತ ಬಹುವರ್ಷದಿಂದ ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್​, ಕಂದಾಯ ಇಲಾಖೆಗಳಲ್ಲಿ ಕೆಳಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಎಲ್ಲ ಬಲ್ಲವರೆಂಬುದು ಸಾರ್ವಜನಿಕ ಅಭಿಪ್ರಾಯ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಧಿಕಾರಿಗಳ ಕಳ್ಳಾಟದ ಬಗ್ಗೆ ಸಿಎಂಗೆ ಪತ್ರಬರೆದರೂ ಪ್ರಯೋಜನವಿಲ್ಲದಂತಾಗಿದೆ. ಕೆಲ ಅಧಿಕಾರಿಗಳು ಅಕ್ರಮ ತಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದರೆ, ಇನ್ನು ಕೆಲವರು ಕುಮ್ಮಕ್ಕು ನೀಡುತ್ತಿದ್ದಾರೆ. ಮೇಲಧಿಕಾರಿಗಳಿಗೆ ದಾರಿ ತಪ್ಪಿಸುವುದು, ಕಡತಗಳಲ್ಲಿ ಉದ್ದೇಶಪೂರ್ವಕ ತಪ್ಪೆಸಗುವುದು, ಅಧಿಕಾರಿಗಳ ಮೇಲೆ ಅನುಮಾನ ಬರುವಂತೆ ತಂತ್ರ ಹೆಣೆಯುವುದರಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ಅರಿವಿದ್ದರೂ ಆಳುವ ವರ್ಗ ಕೈಕಟ್ಟಿ ಕುಳಿತಿರುವುದು ಜನರ ದುರಂತ.

ಕೊಪ್ಪಳದಲ್ಲಿ ಮರಳು ಅಕ್ರಮ ಮಿತಿ ಮೀರಿದೆ. ನಾವು ದೂರು ನೀಡಿದಾಗ ತಡೆಗೆ ತಾತ್ಕಾಲಿಕ ಪ್ರಯತ್ನ ನಡೆಯುತ್ತಿವೆ. ಮತ್ತೆ ಎಂದಿನಂತೆ ಸಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ನೀಡಿದ್ದೇವೆ. ತಡೆಗೆ ಸೂಚಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.