ಕನಕಗಿರಿ ಶ್ರೀ ಕನಕಾಚಲ ದೇವಸ್ಥಾನ ಮುಂಭಾಗದಲ್ಲಿ ತೆಂಗಿನಕಾಯಿ, ಕರ್ಪೂರ, ಉದಿನಕಡ್ಡಿ ಮಾರುತ್ತಿರುವ ವ್ಯಾಪಾರಿ.
ಕನಕಗಿರಿ: ತೆಂಗಿನಕಾಯಿ ಹಾಗೂ ಸಂತೆ ಭೂ ಬಾಡಿಗೆ ಹರಾಜು ಪಡೆದವರು ನಿಯಮಗಳಂತೆ ದೇವಸ್ಥಾನ ಖಾತೆಗೆ ಹಣ ಪಾವತಿಸದ ಕಾರಣ ಹುಲಿಗೆಮ್ಮ ದೇವಸ್ಥಾನ ಮಾದರಿಯಲ್ಲಿ ತೆಂಗಿನ ಕಾಯಿ ಮಾರಾಟಕ್ಕೆ ಇಲ್ಲಿನ ಶ್ರೀ ಕನಕಾಚಲ ದೇವಸ್ಥಾನ ಸಮಿತಿ ಮುಂದಾಗಿದೆ.
ಪ್ರತಿ ವರ್ಷ ಯುಗಾದಿಯ ಕರಿಯಿಂದ ಮುಂದಿನ ವರ್ಷದ ಯುಗಾದಿ ಪಾಢ್ಯದವರೆಗೆ ದೇವಸ್ಥಾನ ವ್ಯಾಪ್ತಿಯಲ್ಲಿ ಕಾಯಿ ಮಾರಾಟ ಮಾಡಲು ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಹರಾಜು ಪಡೆಯುವವರು ವರ್ಷದಿಂದ ವರ್ಷಕ್ಕೆ ಲಕ್ಷಗಟ್ಟಲೇ ಹೆಚ್ಚಿಸುತ್ತಾ ಟೆಂಡರ್ ಹಿಡಿದು ಕಾಯಿ ಮಾರುತ್ತಿದ್ದರು. ಇದು ದೇವಸ್ಥಾನಕ್ಕೆ ಆದಾಯದ ಮೂಲಗಳಲ್ಲಿ ಒಂದಾಗಿತ್ತು.
ಆದರೆ, 2025-26ನೇ ಸಾಲಿನಲ್ಲಿ ನಡೆದ ತೆಂಗಿನಕಾಯಿ ಹಾಗೂ ಸಂತೆ ಭೂ ಬಾಡಿಗೆ ಹರಾಜು ಪಡೆದವರು ನಿಯಮಗಳಂತೆ ದೇವಸ್ಥಾನದ ಖಾತೆಗೆ ಹಣ ಪಾವತಿಸಿಲ್ಲ. ಇದರಿಂದ ಪ್ರಸಕ್ತ ವರ್ಷ ಮಾ.30ರಂದು ದೇವಸ್ಥಾನದಲ್ಲಿ ಕರೆದ ಹರಾಜು ಪ್ರಕ್ರಿಯೆ ಸಭೆಯಲ್ಲಿ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಳೆಯ ಹರಾಜುದಾರರಿಂದ ಹಣ ಪಾವತಿಸಿಕೊಂಡ ಮೇಲೆಯೇ 2026-27ನೇ ಸಾಲಿನ ಹರಾಜು ನಡೆಸುವಂತೆ ಪಟ್ಟುಹಿಡಿದಿದ್ದರು. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಾಯಿ ಒದಗಿಸುವ ಪ್ರಶ್ನೆ ಮೂಡಿದಾಗ ಹುಲಿಗೆಮ್ಮ ದೇವಸ್ಥಾನದಂತೆ ಇಲ್ಲಿಯೂ ದೇವಸ್ಥಾನದಿಂದಲೇ ತಾತ್ಕಾಲಿಕವಾಗಿ ಕಾಯಿ ಮಾರಾಟ ಆರಂಭಿಸಲಾಗಿದೆ.
ಈ ಹಿಂದೆ ಹರಾಜು ಪಡೆದವರಿಗೆ 60 ರೂ.ಗೆ ಜೋಡಿ ಕಾಯಿ ಮಾರುವಂತೆ ಲಿಖಿತವಾಗಿ ಸೂಚಿಸಿದ್ದರೂ 80-100 ರೂ.ಗೆ ಮಾರಿ ಭಕ್ತರ ಜೇಬಿಗೆ ಕತ್ತರಿ ಹಾಕಿದ್ದರು. ಹೀಗಾಗಿ ಇದೀಗ ಹುಲಿಗೆಮ್ಮ ದೇವಸ್ಥಾನ ಮಾದರಿಯಲ್ಲಿ ಇಲ್ಲಿನ ದೇವಸ್ಥಾನದ ಅಧಿಕಾರಿಗಳು ಊದಿನ ಕಡ್ಡಿ, ಕೈಚೀಲ ಸೇರಿ ಕಾಯಿಗೆ 27 ರೂ.ನಂತೆ ವ್ಯಾಪಾರಿಗಳಿಗೆ ನೀಡುತ್ತಿದ್ದು, 60 ರೂ.ಗೆ ಜೋಡಿ ಕಾಯಿ ಮಾರಲು ಅವಕಾಶ ಮಾಡಿಕೊಡಲಾಗಿದೆ. ಮೂವರು ವ್ಯಾಪಾರಿಗಳು ದೇವಸ್ಥಾನದಿಂದ ಕಾಯಿ ಖರೀದಿಸಿ ವ್ಯಾಪಾರ ಆರಂಭಿಸಿದ್ದಾರೆ.
12 ದಿನದಲ್ಲಿ 3 ಸಾವಿರ ಕಾಯಿ ಬಿಕರಿ: ಕಳೆದ 12 ದಿನಗಳಲ್ಲಿ 3 ಸಾವಿರ ಕಾಯಿ ಮಾರಾಟ ಮಾಡಿದ್ದು, ಇದೀಗ ಅಮಾವಾಸ್ಯೆ, ಅಕ್ಷಯ ತೃತೀಯ ಇರುವುದರಿಂದ ಮತ್ತೆ 5 ಸಾವಿರ ಕಾಯಿಗಳನ್ನು ತರಿಸಿಕೊಂಡಿದ್ದು, ಪ್ರತಿ ಕಾಯಿಗೆ 6ರಿಂದ 10 ರೂ. ಲಾಭದ ನಿರೀಕ್ಷೆ ಅಧಿಕಾರಿಗಳಿಗಿದೆ.
25 ಸಾವಿರ ರೂ. ಭೂ ಬಾಡಿಗೆ ಸಂಗ್ರಹ: ಕಾಯಿಯಂತೆ ವಾರದ ಸಂತೆ ಭೂ ಬಾಡಿಗೆ ಹರಾಜು ಸಹ ನಡೆದಿಲ್ಲ. ಇದರಿಂದ ದೇವಸ್ಥಾನ ಸಿಬ್ಬಂದಿಯೇ ಸೋಮವಾರ ನಡೆಯುವ ಸಂತೆಯಲ್ಲಿ ವ್ಯಾಪಾರಿಗಳಿಂದ ಭೂ ಬಾಡಿಗೆ ಸಂಗ್ರಹಿಸಿದ್ದು, ಈ ಮೊತ್ತ 25 ಸಾವಿರ ರೂ. ದಾಟಿದೆ.
ಕಳೆದ ಸಾಲಿನಲ್ಲಿ ತೆಂಗಿನಕಾಯಿ, ಸಂತೆ ಕರ ಸಂಗ್ರಹದ ಹರಾಜು ಹಿಡಿದವರು ಹಣ ಪಾವತಿಸಿಲ್ಲ. ಹೀಗಾಗಿ ಭಕ್ತರ ಅನುಕೂಲ ದೃಷ್ಟಿಯಿಂದ ಹುಲಿಗೆಮ್ಮ ದೇವಸ್ಥಾನ ಮಾದರಿಯಲ್ಲಿ ನಮ್ಮ ದೇವಸ್ಥಾನದಿಂದ ಕಾಯಿ ಮಾರಾಟ ಮಾಡಲಾಗುತ್ತಿದೆ. ಇದನ್ನೇ ಶಾಶ್ವತಪಡಿಸುವ ಉದ್ದೇಶದಿಂದ ಅನುಮತಿಗಾಗಿ ಇಲಾಖೆಗೆ ಪತ್ರ ಬರೆಯಲಾಗುವುದು.