ವಾದಿನೂರು ಗ್ರಾಮದ ಕುಸುಬೆ ಹೊಲದಲ್ಲಿ ಆಯ್ದ ರೈತರಿಗೆ ಬೆಳೆ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ತಂಡವು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿತು. ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತೀರ್ಣಾ ಮುಂದಾಳು ಡಾ.ಎಂ.ವಿ.ರವಿ, ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಇದ್ದರು.
- ಬೆಳೆ ಕುರಿತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಅರಿವು
ಕೊಪ್ಪಳ: ರಾಜ್ಯದ ಪ್ರಮುಖ ಎಣ್ಣೆಕಾಳು ಬೆಳೆಯಾದ ಐಎಸ್‌ಎಫ್ 764 ತಳಿಯ ಕುಸುಬೆ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ತಂಡವು ಜಿಲ್ಲೆಯ ಎರೆಭೂಮಿ ಹೊಂದಿದ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಈಚೆಗೆ ಅರಿವು ಮೂಡಿಸಿತು.
ಎರೆಹಂಚಿನಾಳ ಹಾಗೂ ವಾದಿನೂರು ಗ್ರಾಮಗಳ ಆಯ್ದ ರೈತರಿಗೆ ಬೆಳೆ ಕುರಿತು ಪ್ರಾತ್ಯಕ್ಷಿಕೆ ನೀಡಿದ ತಂಡವು, ನೆಲಗಡಲೆ ಹಾಗೂ ಸೂರ್ಯಕಾಂತಿ ನಂತರ ಹಿಂಗಾರಿನಲ್ಲಿ ಬರುವ ಮುಖ್ಯ ಎಣ್ಣೆಕಾಳು ಬೆಳೆ ಕುಸುಬೆ. ಇದನ್ನು ಉತ್ತರ ಕರ್ನಾಟಕ ಭಾಗದ ಕಪ್ಪುಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ಕೊಡುವ ಬೆಳೆ ಇದಾಗಿದೆ. ಗುಜರಾತ್, ಮಹಾರಾಷ್ಟ್ರ, ಬಿಹಾರ ರಾಜ್ಯಗಳಲ್ಲಿ ಕರಾಡಿ ಎಂಬ ಹೆಸರಿನಲ್ಲಿ ಈ ಬೆಳೆ ಖ್ಯಾತಿ. ಹೃದಯ ಸಂಬಂಧಿ ಆರೋಗ್ಯಕ್ಕೆ ಕುಸುಬೆ ಎಣ್ಣೆ ಸೂಕ್ತ. ಕುಸುಬೆ ಹಿಂಡಿ ಜಾನುವಾರುಗಳಿಗೆ ಉಪಯುಕ್ತ. ಜಿಲ್ಲೆಯಾದ್ಯಂತ 3000 ಎಕರೆ ಪ್ರದೇಶದಲ್ಲಿ ಕುಸುಬೆ ಬೆಳೆಯಲಾಗುತ್ತಿದೆ. ಕುಕನೂರು ತಾಲೂಕಿನ 1000 ಎಕರೆ ಎರೆ ಭೂಮಿಯಲ್ಲಿ ಕುಸುಬೆ ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿತು.
ಬಿತ್ತನೆ ವಿಧಾನ
ಎಕರೆಗೆ 3- 4 ಕಿಲೋ ಗ್ರಾಂ. ಬೀಜವನ್ನು ಸೆಪ್ಟೆಂಬರ್ ಮದ್ಯದಿಂದ ಅಕ್ಟೋಬರ್ 15ರವರೆಗೂ ಬಿತ್ತನೆ ವಾಡುವುದು ಸೂಕ್ತ. ಎಕರೆಗೆ 16ಕೆಜಿ ಸಾರಜನಕ, 16ಕೆಜಿ ರಂಜಕ, 5 ಕೆಜಿ ಪೊಟ್ಯಾಶ್ ಗೊಬ್ಬರಗಳ ಜತೆಗೆ 10 ಕೆಜಿ ಗಂಧಕ ಮತ್ತು 6 ಕೆಜಿ ಸತು ಒದಗಿಸಿದರೆ ಉತ್ತಮ ಫಸಲು ಪಡೆಯಬಹುದು. ಬೀಜೋಪಚಾರವಾಗಿ ಎಕರೆ ಬಿತ್ತನೆ ಬೀಜಕ್ಕೆ 200 ಗ್ರಾಂ. ಅಜೋಸ್ಪಿರಿಲಂ ಬಳಸಿ. ಪೂರ್ವದಲ್ಲಿ ಬೀಜಗಳನ್ನು ಶೇ.2ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 12 ತಾಸು ನೆನೆಸಿ ಬಿತ್ತನೆ ವಾಡಬೇಕು. 120-130 ದಿನಗಳಲ್ಲಿ ಕಟಾವಿಗೆ ಬರುವ ಕುಸುಬೆ ಬೆಳೆ ಲಾಭದಾಯಕ ಮಳೆಯಾಶ್ರಿತ ಬೆಳೆ. ಎಕರೆಗೆ 3-5 ಕ್ವಿಂಟಾಲ್ ಇಳುವರಿ ಪಡೆಯಬಹುದು. ಸದ್ಯ ಕ್ವಿಂಟಾಲ್‌ಗೆ 8600 ರೂ. ಬೆಂಬಲ ಬೆಲೆ ಇದೆ.
ಕೀಟಬಾಧೆ ತಡೆ ಹೇಗೆ?
ಬೆಳೆಗೆ ತಗುಲುವ ಕರಿ ಹೇನು ನಿಯಂತ್ರಣಕ್ಕೆ ಡೈಮೆಥೊಯೇಟ್ 30 ಈಸಿ ಕೀಟನಾಶಕವನ್ನು ಲೀಟರ್ ನೀರಿಗೆ 1.7 ಮಿಲಿ ಬಳಸಿ ಸಿಂಪಡಿಸಬೇಕು. ಎಲೆ ತಿನ್ನುವ ಕೀಟ ಕಾಣಿಸಿದಲ್ಲಿ ಕ್ವಿನಾಲ್ಫಾಸ್ 25 ಇಸಿ ಅಥವಾ ಇವಾವ್ಯಾಕ್ಟೀನ್ ಬೆಂರೆಯೇಟ್ ಕೀಟನಾಶಕವನ್ನು ಲೀಟರ್ ನೀರಿಗೆ 0.40 ಗ್ರಾಂ ಬೆರೆಸಿ ಸಿಂಪಡಿಸಿ. ಮುಖ್ಯವಾಗಿ ಎಲೆ ಮಚ್ಚೆ, ಎಲೆ ಚುಕ್ಕಿ ರೋಗಗಳು ಇದ್ದಲ್ಲಿ 2 ಗ್ರಾಂ ವ್ಯಾಂಕೋಜೆಮ್ 75 ಡಬ್ಲೂಪಿ ಅಥವಾ 2 ಗ್ರಾಂ ಸಾಫ್ ಸಂಯುಕ್ತ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ನಿರ್ವಹಣೆ ಇಲ್ಲದ ಈ ಬೆಳೆ ಬೇಸಿಗೆ ಹಂಗಾಮು, ಮಳೆಯಾಶ್ರಯದಲ್ಲಿ ಉತ್ತಮವಾಗಿ ಬೆಳೆಯಲಿದೆ. ವಾಹಿತಿಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಬಹುದೆಂದು ಕೇಂದ್ರದ ವಿಸ್ತೀರ್ಣಾ ಮುಂದಾಳು ಡಾ. ಎಂ.ವಿ.ರವಿ, ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ತಿಳಿಸಿದ್ದಾರೆ.