ಕಾರಟಗಿ ಪಟ್ಟಣದಲ್ಲಿ ಮೃತ ಆರ್‌ಎಸ್‌ಐ ಮಂಜುನಾಥ ದಾರಿಮನಿ ಅವರಿಗೆ ಸರ್ಕಾರಿ ಸಕಲ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. 
ಕೊಪ್ಪಳ

ಸರ್ಕಾರಿ ಗೌರವದೊಂದಿಗೆ ಆರ್‌ಎಸ್‌ಐಗೆ ನಮನ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕಾರಟಗಿಯಲ್ಲಿ ಮಂಜುನಾಥ ದಾರಿಮನಿ ಅಂತ್ಯಕ್ರಿಯೆ
ಕಾರಟಗಿ: ಭೀಕರ ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟ ಆರ್‌ಎಸ್‌ಐ ಮಂಜುನಾಥ ದಾರಿಮನಿ ಅವರ ಅಂತ್ಯಕ್ರಿಯೆ ಪಟ್ಟಣದಲ್ಲಿ ಸರ್ಕಾರಿ ಸಕಲ ಗೌರವದೊಂದಿಗೆ ಸೋಮವಾರ ಬೆಳಗ್ಗೆ ನೆರವೇರಿತು.
ಬೆಂಗಳೂರಿನಿಂದ ಬರುವಾಗ ಹಿರಿಯೂರು ಬಳಿ ಸಂಭವಿಸಿದ್ದ ಲಾರಿ-ಕಾರು ಅಪಘಾತದಲ್ಲಿ ಮೃತಪಟ್ಟ ಮೂವರು ಪೊಲೀಸ್ ಅಧಿಕಾರಿಗಳ ಪೈಕಿ ಆರ್‌ಎಸ್‌ಐ ಮಂಜುನಾಥ ದಾರಿಮನಿ ಒಬ್ಬರು. ಪಟ್ಟಣದ ನಿವಾಸಿಯಾದ ಇವರು, ಬೆಂಗಳೂರು ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಪಾರ್ಥಿವ ಶರೀರವನ್ನು ಚಳ್ಳಕೆರೆಯಿಂದ ಭಾನುವಾರ ರಾತ್ರಿ 8ಗಂಟೆ ಹೊತ್ತಿಗೆ ಪಟ್ಟಣಕ್ಕೆ ತರಲಾಯಿತು. ಈ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಜನ ಸೇರಿದರು.
ಮುಗಿಲು ಮುಟ್ಟಿದ ಆಕ್ರಂದನ
ಮೃತ ಪೊಲೀಸ್ ಅಧಿಕಾರಿ ಮಂಜುನಾಥ ಪಾರ್ಥಿವ ಶರೀರ ಮನೆ ಬಳಿಗೆ ಬರುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಅಧಿಕಾರಿಯ ತಂದೆ ಪರಸಪ್ಪ ದಾರಿಮನಿ, ತಾಯಿ ಬಸಮ್ಮ ಸೇರಿದಂತೆ ಕುಟುಂಬ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದರು.
ಸೋಮವಾರ ಬೆಳಗ್ಗೆ 9ಗಂಟೆಗೆ ಇಲ್ಲಿನ ಸಿದ್ದೇಶ್ವರ ರಂಗಮಂದಿರದಲ್ಲಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಪಿಐ ಸುಧೀರಕುಮಾರ್ ಬೆಂಕಿ, ಪಿಎಸ್‌ಐ ಕಾಮಣ್ಣ, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಹಾಗೂ ಸದಸ್ಯರು, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಶಿವರೆಡ್ಡಿ ನಾಯಕ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ ಹಾಗೂ ದಲಾಲಿ ವರ್ತಕರ ಸಂಘ, ಲಾರಿ ಮಾಲೀಕರ ಸಂಘ ಸೇರಿದಂತೆ ನಾನಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ನಂತರ ಪೊಲೀಸ್ ಪಡೆಗಳಿಂದ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಸಕಲ ಗೌರವದೊಂದಿಗೆ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.