ಘಟ್ಟಿರಡ್ಡಿಹಾಳ-ಅಳವಂಡಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿರುವುದು. 
ಕೊಪ್ಪಳ

ರಸ್ತೆ-ಸೇತುವೆ ನಿರ್ಮಾಣಕ್ಕೆ ಕೂಡಿ ಬಂತು ಕಾಲ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಘಟ್ಟಿರಡ್ಡಿಹಾಳ ಮಾರ್ಗದಲ್ಲಿ ಕಾಮಗಾರಿ ಆರಂಭ
  • ಬಹು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತ
ಅಳವಂಡಿ: ತಾಲೂಕಿನ ಅಳವಂಡಿಯಿಂದ ಘಟ್ಟಿರಡ್ಡಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಗ್ರಾಮಸ್ಥರ ಹಲವು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಘಟ್ಟಿರಡ್ಡಿಹಾಳ ಕೊಪ್ಪಳ ತಾಲೂಕಿನ ಗಡಿ ಗ್ರಾಮವಾಗಿದ್ದು, 1500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ತಾಲೂಕು ಕೇಂದ್ರದಿಂದ 40 ಕಿ.ಮೀ. ದೂರದಲ್ಲಿದೆ. ಇಲ್ಲಿನ ಜನರು ಯಾವುದೇ ಕೆಲಸಗಳಿಗೆ ಕೊಪ್ಪಳಕ್ಕೆ ತೆರಳಬೇಕೆಂದರೂ 6 ಕಿ.ಮೀ. ಅಂತರದ ಮುಂಡರಗಿಯಿಂದ ಸುತ್ತುವರಿದು ಒಟ್ಟು 12 ಕಿ.ಮೀ. ಹೆಚ್ಚು ಅಂತರದಿಂದ ಹೋಗಬೇಕಿತ್ತು. ಕಾರಣ ಅಳವಂಡಿಯಿಂದ ಘಟ್ಟಿರಡ್ಡಿಹಾಳಕ್ಕೆ ಇರುವ 6 ಕಿ.ಮೀ. ದೂರದ ರಸ್ತೆಯು ಕಚ್ಚಾ ರಸ್ತೆ. ಅಲ್ಲದೆ, ಮಾರ್ಗ ಮಧ್ಯದಲ್ಲಿ ಹಿರೇಹಳ್ಳ ಹಾಗೂ ಎರಡು ಸಣ್ಣ ಹಳ್ಳಗಳು ಇರುವುದರಿಂದ ವಾಹನ ಸಂಚಾರ ಕಷ್ಟಸಾಧ್ಯವಿತ್ತು.
ಇನ್ನು ಮಳೆಗಾಲದಲ್ಲಂತೂ ಈ ರಸ್ತೆಯತ್ತ ಯಾರೂ ಸುಳಿಯುತ್ತಿರಲಿಲ್ಲ. ಇದರಿಂದ ಈ ರಸ್ತೆಯಲ್ಲಿರುವ ಸಾವಿರಾರು ಎಕರೆ ಕೃಷಿ ಭೂಮಿಗಳಲ್ಲಿ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗುತ್ತಿತ್ತು. ಒಂದುವೇಳೆ ಈ ರಸ್ತೆ ಮೂಲಕವೇ ತೆರಳಬೇಕೆಂದರೆ ಕಾಲ್ನಡಿಗೆಯಿಂದ ಮಾತ್ರ ಸಾಧ್ಯವಿತ್ತು. ಅದು ಕೂಡ ಹಳ್ಳದ ನೀರಿನಲ್ಲೇ ಸಾಗಬೇಕಿತ್ತು. ಈಗ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಜನರ ಹಲವು ವರ್ಷಗಳ ಬೇಡಿಕೆಗೆ ಪ್ರತಿಫಲ ದೊರೆತಿದೆ.
ಸೇತುವೆ ಹಾಗೂ ರಸ್ತೆ ನಿರ್ಮಾಣದಿಂದ ಹೋಬಳಿ ಕೇಂದ್ರ ಘಟ್ಟಿರಡ್ಡಿಹಾಳ ಗ್ರಾಮಕ್ಕೆ ತೆರಳುವವರಿಗೆ ಅನುಕೂಲವಾಗಲಿದ್ದು, ಇಲ್ಲಿಂದ ಕೊಪ್ಪಳಕ್ಕೆ ತೆರಳುವವರಿಗೆ 12 ಕಿ.ಮೀ. ದೂರ ಕಡಿಮೆ ಆಗಲಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

ಕಲ್ಯಾಣ ಪಥ ಅನುದಾನ

ಸ್ವಾತಂತ್ರೃ ನಂತರದ ದಿನಗಳಿಂದಲೂ ಈ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಇಲ್ಲಿನ ಜನರು ಬೇಡಿಕೆ ಸಲ್ಲಿಸುತ್ತಲೇ ಇದ್ದರು. ಹಲವು ದಶಕಗಳ ಬೇಡಿಕೆಯಂತೆ ಘಟ್ಟಿರಡ್ಡಿಹಾಳ-ಅಳವಂಡಿ ಮಾರ್ಗ ಮಧ್ಯದ ಹಳ್ಳಕ್ಕೆ ಸೇತುವೆ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗೆ 2024-25ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿ ಸೇತುವೆ ನಿರ್ಮಾಣಕ್ಕೆ 244.41 ಲಕ್ಷ ರೂ., ರಸ್ತೆ ನಿರ್ಮಾಣಕ್ಕೆ 426.811 ಲಕ್ಷ ರೂ. ಸರ್ಕಾರ ಮಂಜೂರು ಮಾಡಿದ್ದು, ಕಾಮಗಾರಿಯೂ ಆರಂಭವಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.
"

ಘಟ್ಟಿರಡ್ಡಿಹಾಳ-ಅಳವಂಡಿ ರಸ್ತೆಗೆ ಹೊಂದಿಕೊಂಡು ಗ್ರಾಮದ ಸಾವಿರಾರು ಎಕರೆ ಕೃಷಿ ಭೂಮಿ ಇದೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿತ್ತು, ಸೇತುವೆ ಹಾಗೂ ರಸ್ತೆ ನಿರ್ಮಾಣದಿಂದ ಕೃಷಿಗೂ ಅನೂಕೂಲ ಆಗಲಿದೆ. ಹಳ್ಳದ ಆಚೆ ಕೆರೆ ಇರುವುದರಿಂದ ನೀರು ತರಲು ಸಹ ತೊಂದರೆಯಾಗಿತ್ತು. ಈಗ ಸಮಸ್ಯೆ ಬಗೆಹರಿಯಲಿದೆ.

ಘಟ್ಟಿರೆಡ್ಡಿಹಾಳ ಗ್ರಾಮಸ್ಥರು ತಾಲೂಕು ಕೇಂದ್ರ ತಲುಪಲು ಸುತ್ತಿ ಬಳಸಿ ತೆರಳಬೇಕಿತ್ತು. ಆದರೆ ಗ್ರಾಮ ಸಮೀಪದಲ್ಲಿನ ಹಿರೇಹಳ್ಳಕ್ಕೆ ಸೇತುವೆ ನಿರ್ಮಾಣ ಹಾಗೂ ಅಳವಂಡಿ ರಸ್ತೆ ನಿರ್ಮಾಣದಿಂದ ಗ್ರಾಮದ ಬಹುದಿನದ ಕನಸು ನನಸಾಗಿ ಪ್ರಯಾಣಕ್ಕೂ ಅನುಕೂಲವಾಗಿದೆ.