ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ. ವೆಂಕಟ್ ಸಿಂಗ್ ಉದ್ಘಾಟಿಸಿದರು.ಬೆಂಗಳೂರು ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಮತ್ತು ಡಾ. ಹರೀಶಕುಮಾರ, ಡಿಸಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ಧಿ ಇತರರಿದ್ದರು.
- ಬಿ. ವೆಂಕಟ್ ಸಿಂಗ್ ಅನಿಸಿಕೆ
- ಸಾರ್ವಜನಿಕ ಸಂಪರ್ಕ ಅಧಿಕಾರಿಗಳೊಂದಿಗೆ ಸಂವಾದ
ಕೊಪ್ಪಳ : ಮಾಹಿತಿ ಹಕ್ಕು ಕಾಯ್ದೆಯು ಜನಪರ ಮತ್ತು ಅತ್ಯಂತ ಪ್ರಬಲವಾದ ಕಾನೂನಾಗಿದೆ. ಇದು ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳಿಗೆ ರಕ್ಷಣೆಯೂ ಹೌದು ಮತ್ತು ಎಚ್ಚರಿಕೆಯೂ ಹೌದು ಎಂದು ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ. ವೆಂಕಟ್ ಸಿಂಗ್ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಬುರಗಿ ಪೀಠದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ ಆಯುಕ್ತರು, ಕಳೆದ ಮೂರು ತಿಂಗಳಲ್ಲಿ 1,400 ಪ್ರಕರಣಗಳ ವಿಚಾರಣೆ ನಡೆಸಿ 605 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 764 ಪ್ರಕರಣಗಳು ಬಾಕಿ ಇವೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜನರು ದ್ವೀತಿಯ ಮೇಲ್ಮನವಿಗಾಗಿ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ಫೆಬ್ರವರಿಯಿಂದ ಕಲಬುರಗಿ ಪೀಠದಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಮಾಹಿತಿ ಆಯುಕ್ತರು ಬದ್ರುದ್ದೀನ್ ಕೆ. ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯನ್ನು ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡರೆ, ಅದು ಅವರ ಸೇವಾವಧಿಯಲ್ಲಿ ಮಾತ್ರವಲ್ಲದೆ ನಿವೃತ್ತಿಯ ನಂತರವೂ ಸಹಕಾರಕ್ಕೆ ಬರುತ್ತದೆ. ಅಧಿಕಾರಿಗಳು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದಾಗ ಆತ್ಮವಿಶ್ವಾಸ ತಾನಾಗಿಯೇ ವೃದ್ಧಿಸುತ್ತದೆ. ಯಾವುದನ್ನು ಮಾಹಿತಿ ಹಕ್ಕಿನಡಿ ನೀಡಬಹುದು ಮತ್ತು ಯಾವುದನ್ನು ನೀಡಬಾರದು ಎಂಬ ಸ್ಪಷ್ಟ ಅರಿವು ಅಧಿಕಾರಿಗಳಲ್ಲಿ ಇರಬೇಕು. ಅರ್ಜಿ ಬಂದ ತಕ್ಷಣ ಗಾಬರಿಯಾಗುವ ಬದಲು, ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ನಿಗದಿತ 30 ದಿನಗಳ ಕಾಲಾವಧಿಗೂ ಮುನ್ನವೇ ಮಾಹಿತಿ ಅಥವಾ ಸೂಕ್ತ ಹಿಂಬರಹ ನೀಡುವುದರಿಂದ ಅನಗತ್ಯ ಒತ್ತಡವನ್ನು ತಪ್ಪಿಸಬಹುದು ಎಂದರು.
ಇಲಾಖೆ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರತಿಯೊಂದು ಇಲಾಖೆಸಯು ತನ್ನ ಮಾಹಿತಿಯನ್ನು ಕಾಯ್ದೆಯ ಸೆಕ್ಷನ್ 4(1)(ಎ) ಮತ್ತು 4(1)(ಬಿ) ಅಡಿಯಲ್ಲಿ ವಿಂಗಡಿಸಿ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಹೀಗೆ ಮಾಡುವುದರಿಂದ ಸಾರ್ವಜನಿಕರಿಗೆ ಮಾಹಿತಿ ಸುಲಭವಾಗಿ ಲಭ್ಯವಾಗಲಿದ್ದು, ಶೇ. 80ರಷ್ಟು ಅರ್ಜಿಗಳ ಸಂಖ್ಯೆ ತಾನಾಗಿಯೇ ಕಡಿಮೆಯಾಗುತ್ತದೆ. ಮಾಹಿತಿ ಹಕ್ಕಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯಲ್ಲಿ ಯಾವುದೇ ರೀತಿಯ ಅಲಕ್ಷ್ಯ ಅಥವಾ ವಿಳಂಬ ಮಾಡಬಾರದು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ಧಿ, ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಎಡಿಸಿ ಸಿದ್ರಾಮೇಶ್ವರ ಇತರರಿದ್ದರು.
ಆರ್.ಟಿ.ಐ ಕಾಯ್ದೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಲ್ಲಿ 24 ಗಂಟೆಯೊಳಗೆ ಮಾಹಿತಿ ನೀಡುವುದು ಕಡ್ಡಾಯ.
ಅಧಿಕಾರಿಗಳು ಮಾಹಿತಿ ಹಕ್ಕಿನ ಕುರಿತು ಸರಿಯಾಗಿ ತಿಳಿದುಕೋಳ್ಳಬೇಕು. ಪ್ರತಿ ಕಚೇರಿಯಲ್ಲಿ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ವಿವರವಿರುವ ಬೋರ್ಡ್ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.
ಕೊಪ್ಪಳದ ಮೀಡಿಯಾ ಕ್ಲಬ್ನಿಂದ ಶಿನಿವಾರ ಮಾಹಿತಿ ಹಕ್ಕು ಆಯುಕ್ತರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ. ವೆಂಕಟ್ ಸಿಂಗ್, ಬೆಂಗಳೂರು ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಮತ್ತು ಡಾ. ಹರೀಶಕುಮಾರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೀಡಿಯಾ ಕ್ಲಬ್ ಅಧ್ಯಕ್ಷ ದೇವು ನಾಗನೂರ, ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಪ್ರಧಾನ ಕಾರ್ಯದರ್ಶಿ ದತ್ತು ಕಮ್ಮಾರ, ಖಜಾಂಚಿ ಅನಿಲ ಬಾಚನಹಳ್ಳಿ, ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಹುಸೇನ ಪಾಷಾ, ದೋಡ್ಡೇಶ ಎಲಿಗಾರ, ವೀಠಲ ದುತ್ತರಗಿ, ಈರಯ್ಯ ಹಿರೇಮಠ, ಸಿದ್ದಪ್ಪ ಹಂಚಿನಾಳ, ಪರಮೇಶ ರಡ್ಡಿ ಇತರರಿದ್ದರು.