ಕೊಪ್ಪಳದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆ ನಡೆಯಿತು. ಅಧ್ಯಕ್ಷ ಬಾಲಚಂದ್ರನ್ ಎಸ್., ತಾಪಂ ಇಒ ದುಂಡಪ್ಪ ತುರಾದಿ ಇದ್ದರು.
- ಅಧ್ಯಕ್ಷ ಬಾಲಚಂದ್ರನ್ ಎಸ್.ಸೂಚನೆ
ಕೊಪ್ಪಳ : ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಮರು ಪರಿಶೀಲನೆ ನಡೆಸುತ್ತಿದ್ದು, ಅರ್ಹರಿಗೆ ಯೋಜನೆ ಸಿಗುವಂತೆ ನೋಡಿಕೊಳ್ಳಿ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಾಲಚಂದ್ರನ್ ಎಸ್.ಸೂಚಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಸಿಡಿಪಿಒ ರೋಹಿಣಿ ಮಾತನಾಡಿ, ಗೃಹಲಕ್ಷಿ$್ಮ ಯೋಜನೆಯಡಿ ಏಪ್ರೀಲ್ವರೆಗೆ ದುಡ್ಡು ಬಿಡುಗಡೆಯಾಗಿದೆ. ಮರು ಅರ್ಜಿ ಸಲ್ಲಿಕೆ ಅಧಿಸೂಚನೆ ಬಂದಿಲ್ಲ. ಕೊಪ್ಪಳ ತಾಲೂಕಿನಲ್ಲಿ 1,900 ಲಾನುಭವಿಗಳು ಮರಣ ಹೊಂದಿದ್ದಾರೆ. ಈ ವಿವರ ಈಗಾಗಲೇ ನೀಡಿದ್ದೇವೆಂದು ವಿವರಿಸಿದರು. ಅಧ್ಯಕ್ಷರು ಮಾತನಾಡಿ, ಪ್ರತಿ ಗ್ರಾಮವಾರು ಲಾನುಭವಿಗಳ ಪರಿಷ್ಕರಣೆ ನಡೆಸಿ. ನಿಧನ ಹೊಂದಿದವರ ವಿವರ ಕಲೆ ಹಾಕಿ ಅಪ್ಡೇಟ್ ಮಾಡುವಂತೆ ತಿಳಿಸಿದರು.
ಸದಸ್ಯ ಲಕ್ಷ್ಮಣ ಡೊಳ್ಳಿನ್ ಮಾತನಾಡಿ, ಗಿಣಗೇರಾ ಗ್ರಾಮದಲ್ಲಿ ಜೆಸ್ಕಾಂ ಜಾಗೃತದಳ ಅಧಿಕಾರಿಗಳು ದಾಳಿ ಮಾಡಿ ಮೀಟರ್ ಇಲ್ಲದವರಿಗೆ ದಂಡ ಹಾಕಿದ್ದಾರೆ. ಆದರೆ, ಮೀಟರ್ಗೆ ಹಣ ಕಟ್ಟಿದ್ದರೂ ಅಳವಡಿಕೆ ಮಾಡಿಲ್ಲ. ಇದರಿಂದ ಲಾನುಭವಿಗಳಿಗೆ ಅನ್ಯಾಯವಾಗಲಿದೆ ಎಂದು ಗಮನ ಸೆಳೆದರು. ಸದಸ್ಯ ರಮೇಶ್ ಹ್ಯಾಟಿ ಭಾಗ್ಯನಗರದಲ್ಲಿ ವಿದ್ಯುತ್ ಕಡಿತವಾಗುತ್ತಿದೆ ಎಂದರು. ಈ ಬಗ್ಗೆ ಪರಿಶೀಲಿಸಿ ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಿ. ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಆದೇಶ ಬಂದಲ್ಲಿ ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.
ಸದಸ್ಯೆ ಜ್ಯೋತಿ ಗೊಂಡಬಾಳ, ಗೃಹ ಬಳಕೆ ಸಿಲಿಂಡರ್ಗೆ ಪೂರ್ಣ ಹಣ ಪಡೆದರೂ ಬಿಲ್ ನೀಡುತ್ತಿಲ್ಲವೆಂದರು. ಸದಸ್ಯ ಮೆಹಬೂಬ್ ಪಾಷಾ, ವಸತಿ ನಿಲಯ, ಶಾಲೆ, ಅಂಗನವಾಡಿ ಕೇಂದ್ರಗಳಿಗೆ ನಿರಂತರ ಸಿಲಿಂಡರ್ ಪೂರೈಸುವಂತೆ ತಿಳಿಸಿದರು. ಅಧ್ಯಕ್ಷರು ಪ್ರತಿಕ್ರಿಯಿಸಿ, ವಿತರಕರು ಗ್ರಾಹಕರೊಂದಿಗೆ ಸಂಯಮದಿಂದ ವರ್ತಿಸಿ.ಹೆಚ್ಚಿನ ಹಣ ಪಡೆದಲ್ಲಿ ಕ್ರಮವಹಿಸಲಾಗುವುದೆಂದು ಎಚ್ಚರಿಸಿದರು.
ಗಂಗಾವತಿ ವಿಭಾಗದ ಬಸ್ಗಳು ಗಿಣಗೇರಾ ಬೈಪಾಸ್ನಿಂದ ಸಂಚರಿಸುವ ಕಾರಣ ಗ್ರಾಮೀಣ ಜನರಿಗೆ ಸಮಸ್ಯೆಯಾಗುತ್ತಿದೆ ಎಂದರು. ಸದಸ್ಯ ಅನ್ವರ್ ಪಾಷಾ ಅಳವಂಡಿ ಬಸ್ನಿಲ್ದಾಣದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಆರಂಭಿಸುವಂತೆ ಮನವಿ ಮಾಡಿದರು. ಮೆಹಬೂಬ್ ಪಾಷಾ ಸಭೆಗೆ ಬರುವಾಗ ಅಧಿಕಾರಿಗಳು ಅನುಪಾಲನಾ ವರದಿಯೊಂದಿಗೆ ಬರುವಂತೆ ಮನವಿ ಮಾಡಿದರು. ಈ ಬಗ್ಗೆ ಕ್ರಮವಹಿಸಲು ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ತಾಪಂ ಇಒ ದುಂಡಪ್ಪ ತುರಾದಿ, ಅನುಷ್ಠಾನ ಸಮಿತಿ ಸದಸ್ಯರಾದ ಸವಿತಾ ಗೊರಂಟ್ಲಿ, ಪರಶುರಾಮ ಕೊರವರ, ಅನ್ನದಾನಯ್ಯಸ್ವಾಮಿ, ರಾಮಣ್ಣ ಚೌಡ್ಕಿ ಹಾಗೂ ಅಧಿಕಾರಿಗಳಿದ್ದರು.