ತಾಲೂಕಿನ ನಾಗೇಶನಹಳ್ಳಿಗೆ ನೀರಿನ ಪೂರೈಕೆ ಮಾಡಿ ನಲ್ಲಿಯಲ್ಲಿ ನೀರು ಬರುತ್ತಿರುವುದನ್ನು ವಿಸಿದ ತಾಪಂ ಇಒ ದುಂಡಪ್ಪ ತುರಾದಿ.
- ನಾಗೇಶನಹಳ್ಳಿ ಗ್ರಾಮಕ್ಕೆ ಕುಡಿವ ನೀರಿನ ವ್ಯವಸ್ಥೆ
ಕೊಪ್ಪಳ : ತಾಲೂಕಿನ ಬೂದಗುಂಪಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೇಶನಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರು ಶನಿವಾರ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ತಾಲೂಕು ಆಡಳಿತ ತ್ವರಿತವಾಗಿ ಸ್ಪಂದಿಸಿ ನೀರಿನ ವ್ಯವಸ್ಥೆ ಕಲ್ಪಿಸಿದೆ.
ಪ್ರತಿಭಟನೆ ನಂತರ ತಾಪಂ ಇಒ ದುಂಡಪ್ಪ ತುರಾದಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಕುಡಿಯುವ ನೀರಿನ ಸಮಸ್ಯೆಯನ್ನು ಎರಡು ದಿನಗಳೊಳಗೆ ಬಗೆಹರಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮದಲ್ಲಿ ಹೊಸದಾಗಿ ಬೋರ್ವೆಲ್ ಕೊರೆಯಿಸಿ ಪೈಪ್ಲೈನ್ ಅಳವಡಿಸಲಾಗಿದ್ದರೂ ಅಂತರ್ಜಲ ಮಟ್ಟ ಕುಸಿದ ಕಾರಣ ಸಮರ್ಪಕ ಪ್ರಮಾಣದಲ್ಲಿ ನೀರು ದೊರೆಯುತ್ತಿರಲಿಲ್ಲ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.
ಇದಕ್ಕೆ ಪರ್ಯಾಯವಾಗಿ ಗ್ರಾಪಂನಿಂದ ಖಾಸಗಿ ಬೋರ್ವೆಲ್ ಗುತ್ತಿಗೆ ಪಡೆದು ಪೈಪ್ಲೈನ್ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನಾಗೇಶನಹಳ್ಳಿ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದೆ.
"
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಕ್ಷಣ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಿದ್ದು, ಮುಂದೆಯೂ ನಿರಂತರ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.
— ದುಂಡಪ್ಪ ತುರಾದಿ