ಕೊಪ್ಪಳದ ಅಶೋಕ ವೃತ್ತದಲ್ಲಿ ಕಿತ್ತು ನೆತಾಡುತ್ತಿದ್ದ ಹಸಿರು ಹೊದಿಕೆಯನ್ನು ತೆರವುಗೊಳಿಸಿರುವುದು.
- ಸಿಗ್ನಲ್ ಬಳಿ ತೂರಾಡುತ್ತಿದ್ದ ಹಸಿರು ಹೊದಿಕೆ ತೆರವು
ಕೊಪ್ಪಳ : ನಗರದ ಬಸವೇಶ್ವರ ವೃತ್ತ ಹಾಗೂ ಅಶೋಕ ವೃತ್ತಗಳ ಸಿಗ್ನಲ್ ಬಳಿ ಕಿತ್ತುಹೋಗಿ ಗಾಳಿಗೆ ತೂರಾಡುತ್ತಿದ್ದ ಹಸಿರು ಹೊದಿಕೆ ಕುರಿತು ವಿಜಯವಾಣಿಯಲ್ಲಿ ಪ್ರಕಟವಾದ ವರದಿಗೆ ನಗರಸಭೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿದ್ದು, ಅಪಾಯಕಾರಿಯಾಗಿದ್ದ ಹೊದಿಕೆಯನ್ನು ತೆರವುಗೊಳಿಸಿದ್ದಾರೆ.
ಬೇಸಿಗೆಯ ತಾಪದಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ನೆರಳು ಒದಗಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಹಸಿರು ಹೊದಿಕೆಯ ಒಂದು ಭಾಗ ಕಳೆದ ಹಲವು ದಿನಗಳಿಂದ ಕಿತ್ತುಹೋಗಿ ರಸ್ತೆಯ ಮೇಲ್ಭಾಗದಲ್ಲಿ ನೇತಾಡುತ್ತಿತ್ತು. ಗಾಳಿಯ ವೇಗಕ್ಕೆ ಅನುಗುಣವಾಗಿ ಅತ್ತಿತ್ತ ತೂರಾಡುತ್ತಿದ್ದ ಕಾರಣ ವಾಹನ ಸವಾರರಲ್ಲಿ ಆತಂಕ ಮನೆಮಾಡಿತ್ತು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಭೀತಿ ವ್ಯಕ್ತವಾಗಿತ್ತು.
ಈ ಕುರಿತು ವಿಜಯವಾಣಿಯಲ್ಲಿ ಗುರುವಾರ(ಜು. 11) ಕಿತ್ತು ನೇತಾಡುತ್ತಿರುವ ಹಸಿರು ಹೊದಿಕೆ, ಅನಾಹುತಕ್ಕೂ ಮುನ್ನ ತೆರವುಗೊಳಿಸಲು ವಾಹನ ಸವಾರರ ಆಗ್ರಹ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಾಯಕಾರಿಯಾಗಿದ್ದ ಹಸಿರು ಹೊದಿಕೆಯನ್ನು ತೆರವುಗೊಳಿಸುವ ಕಾರ್ಯ ಕೈಗೊಂಡರು.
ನಗರದ ಪ್ರಮುಖ ವೃತ್ತಗಳಲ್ಲಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಲು ಅಧಿಕಾರಿಗಳು ಕೈಗೊಂಡ ತ್ವರಿತ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಿದಾಗ ಸಂಬಂಧಿಸಿದ ಇಲಾಖೆ ಕೂಡಲೇ ಸ್ಪಂದಿಸುವುದು ಸ್ವಾಗತಾರ್ಹ ಬೆಳವಣಿಗೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಮುಂದೆಯೂ ನಗರದಲ್ಲಿನ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಮೂಲಸೌಕರ್ಯಗಳ ನಿರ್ವಹಣೆಗೆ ನಗರಸಭೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜು. 11ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯ ತುನುಕು.