ಜಿಲ್ಲೆಯ ಯಲಬುರ್ಗಾ ತಾಲೂಕಿನ ಹನುಮಾಪುರದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಆಯೋಜಿಸಿದ್ದ ಜನಸಂಪರ್ಕ ಸಂವಾದ ಕಾರ್ಯಕ್ರಮವನ್ನು ಗೆದಿಗೇರಿ ಗ್ರಾಂಪಂ ಪಿಡಿಒ ದೊಡ್ಡಪ್ಪ ನಾಯಕ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಅಧಿಕಾರಿ ಶಿವಲೀಲಾ ವನ್ನೂರು, ವಿದ್ಯಾಶ್ರೀ ಹೊಟ್ಟೇರ, ಮಹೇಶ ಬಡಿಗೇರ, ಹುಲಗಪ್ಪ, ಪ್ರತಿಭಾ ಕಾಶೀಮಠ, ಸವಿತಾ ಆರೇರ್, ಕಾನ್ಸಟೇಬಲ್ ರತ್ನ ಇದ್ದರು.
- ಶಿವಲೀಲಾ ವನ್ನೂರು ಹೇಳಿಕೆ
- ಜನಸಂಪರ್ಕ ಸಂವಾದ ಕಾರ್ಯಕ್ರಮ
ಕೊಪ್ಪಳ : ಸರ್ಕಾರ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹಲವು ಹಕ್ಕುಗಳನ್ನು ನೀಡಿದೆ. ನೀವು ಮಕ್ಕಳ ಹಕ್ಕುಗಳನ್ನು ಗೌರವಿಸಿದರೆ ಕಾನೂನು ನಿಮ್ಮನ್ನು ಗೌರವಿಸುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಅಧಿಕಾರಿ ಶಿವಲೀಲಾ ವನ್ನೂರು ಹೇಳಿದರು.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಹನುಮಾಪುರದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಆಯೋಜಿಸಿದ್ದ ಜನಸಂಪರ್ಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹವು ತಾಯಿ ಹಾಗೂ ನವಜಾತ ಶಿಶು ಮರಣ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆ- 2006ರಡಿ ಬಾಲ್ಯ ವಿವಾಹ ನಡೆಸಿದವರಿಗೆ 2 ವರ್ಷ ಜೈಲು ಹಾಗೂ ರೂ.1 ಲಕ್ಷ ದಂಡ ವಿಧಿಸಲಾಗುತ್ತದೆ. ಜನರಲ್ಲಿ ಜಾಗೃತಿ ಮೂಡಿಸಲು ಸಂವಾದ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಗೆದಿಗೇರಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ವಿದ್ಯಾಶ್ರೀ ಹೊಟ್ಟೇರ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ -2012ನ್ನು ಸರ್ಕಾರ ಜಾರಿಗೆ ತಂದಿದ್ದು, ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಈ ಕಾಯ್ದೆಯಡಿ 18 ವರ್ಷದೊಳಗಿನ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಸಂಜ್ಞೆಗಳ ಮೂಲಕ ಅಥವಾ ಶಾಬ್ದಿಕವಾಗಿ ಕಿರುಕುಳ ನೀಡುವುದೂ ದೌರ್ಜನ್ಯವೆಂದು ಪರಿಗಣಿಸಲಾಗುತ್ತದೆ. ಈ ಕಾಯ್ದೆಯಡಿ ಪ್ರಕರಣ ದಾಖಲಾದಲ್ಲಿ ಅದು ವಿಚಾರಣಾರ್ಹ ಹಾಗೂ ಜಾಮೀನು ರಹಿತ ಪ್ರಕರಣವಾಗಿರುತ್ತದೆ. ಆದ್ದರಿಂದ ಎಲ್ಲರೂ ಮಕ್ಕಳ ಹಕ್ಕುಗಳನ್ನು ಗೌರವಿಸಬೇಕು ಎಂದು ಹೇಳಿದರು.
ಗೆದಿಗೇರಿ ಗ್ರಾಂಪಂ ಪಿಡಿಒ ದೊಡ್ಡಪ್ಪ ನಾಯಕ, ಯಲಬುರ್ಗಾ ಕಾರ್ಮಿಕ ನಿರೀಕ್ಷಕ ಮಹೇಶ ಬಡಿಗೇರ, ಗೆದಗೇರಿ ಗ್ರಾಂಪಂ ಕಾರ್ಯದರ್ಶಿ ಹುಲಗಪ್ಪ, ಸಮಾಜ ಕಾರ್ಯಕರ್ತೆ ಪ್ರತಿಭಾ ಕಾಶೀಮಠ, ಸವಿತಾ ಆರೇರ್, ಕಾನ್ಸಟೇಬಲ್ ರತ್ನ, ರವಿ ಬಡಿಗೇರ, ದೇವರಾಜ್ ತಿಲಗರ ಇತರರಿದ್ದರು.