ಕನಕಗಿರಿಯಿಂದ ಕಲಕೇರಿಗೆ ಸಾಗುವ ರಸ್ತೆ ಕಾಮಗಾರಿ ಇಂದಿರಾನಗರದಲ್ಲಿ ಅಪೂರ್ಣಗೊಂಡ ಹಿನ್ನೆಲೆ ಮಹಿಳೆಯರು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಾದ ರೇಣುಕಾ ಮರಾಠಿ, ಸರಸ್ವತಿ ಮರಾಠಿ, ಸಾವಿತ್ರಮ್ಮ, ಸುಜಾತಾ, ಚಂದ್ರಮ್ಮ, ಸುನಂದಮ್ಮ, ಸುಂದರಮ್ಮ, ರೇಷ್ಮಾ, ಹುಸೇನಬಿ, ರೇಣುಕಮ್ಮ, ಶರಣಮ್ಮ ಇತರರಿದ್ದರು.
- ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಮಹಿಳೆಯರ ಆಕ್ರೋಶ
ಕನಕಗಿರಿ: ಪಟ್ಟಣದಿಂದ ಕಲಕೇರಿಗೆ ಸಾಗುವ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಧೂಳಿನಿಂದ ತೊಂದರೆಯಾಗುತ್ತಿದ್ದು ಇಂದಿರಾ ನಗರದ ಮಹಿಳೆಯರು ಭಾನುವಾರ ರಸ್ತೆಗಿಳಿದು ಗುತ್ತಿಗೆದಾರರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
3ಕೋಟಿ ರೂ.ವೆಚ್ಚದಲ್ಲಿ ಪಟ್ಟಣದಿಂದ ಕಲಕೇರಿಗೆ ಡಾಂಬರೀಕರಣ ನಿಮಿತ್ತ ಕಳೆದ 4ತಿಂಗಳ ಹಿಂದೆ ಈ ರಸ್ತೆಗೆ ಕಂಕರ್ ಹಾಕಲಾಗಿದೆ. ಆ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸುವ ನೆಪದಲ್ಲಿ ಕಾಮಗಾರಿ ತಡವಾಯಿತು. ಆದರೆ, ಆ ಬಳಿಕ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಇತ್ತ ಕಡೆ ಸುಳಿಯುತ್ತಿಲ್ಲ. ಮುದಗಲ್-ಗಂಗಾವತಿ ರಾಜ್ಯ ಹೆದ್ದಾರಿಯಿಂದ ಸುಮಾರು 200 ಮೀ ನಷ್ಟು ಹಾಗೆಯೇ ಉಳಿದಿದೆ. ದಿನನಿತ್ಯ ನೂರಾರು ವಾಹನಗಳ ಸಂಚಾರದಿಂದ ರಸ್ತೆಗೆ ಹಾಕಿದ ಕಂಕರ್ ಧೂಳಿನಿಂದ ನಮಗೆ ಹಿಂಸೆಯಾಗುತ್ತಿದೆ. ಮನೆಯೊಳಗೂ ಧೂಳು ಬರುತ್ತಿದೆ ಎಂದು ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಹಲವು ಬಾರಿ ಪಪಂ ಸದಸ್ಯರಿಗೆ ತಿಳಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅಲ್ಲದೇ, ರಸ್ತೆಯಲ್ಲಿ ಕಂಕರ್ ಇರುವುದರಿಂದ ವಾಹನ ಸವಾರರು ಬೀಳುವುದು ಸಾಮಾನ್ಯವಾಗಿದೆ. ಕೂಡಲೇ ರಸ್ತೆಯನ್ನು ಸರಿಪಡಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.