ಕೊಪ್ಪಳ ತಾಪಂ ಆವರಣದಲ್ಲಿ ತಾಪಂ ಇಒ ದುಂಡಪ್ಪ ತುರಾದಿ ಅವರಿಗೆ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಸಮಿತಿಯ ಅಧ್ಯಕ್ಷೆ ಯಲ್ಲಮ್ಮ ಹಾಗೂ ಸಮಿತಿಯ ಕಾರ್ಯದರ್ಶಿ ಸುಂಕಪ್ಪ ಗದಗ ಅವರು ಮನವಿ ಸಲ್ಲಿಸಿದರು. ಹುಲುಗಪ್ಪ ಗೋಕಾವಿ, ಖಾಲೆಸಾಬ ಕರಡಿ, ಮುಮ್ತಾಬೇಗಂ ಕರಡಿ, ಸೂಶಿಲಮ್ಮ, ಮಹೇಶ, ಹುಸೇನ್​ಸಾಬ ಇದ್ದರು. 
ಕೊಪ್ಪಳ

ಸಮರ್ಪಕ ಕೆಲಸ ಒದಗಿಸಲು ಒತ್ತಾಯ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ತಾ.ಪಂ. ಇಒಗೆ ಮನವಿ
ಕೊಪ್ಪಳ : ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ಒದಗಿಸಲು ಹಾಗೂ ಬಾಕಿ ಇರುವ ಕೂಲಿ ಹಣವನ್ನು ತಕ್ಷಣ ಪಾವತಿಸಲು ಒತ್ತಾಯಿಸಿ, ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಸಮಿತಿಯ ವತಿಯಿಂದ ಮಂಗಳವಾರ ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಕಾರ್ಯದರ್ಶಿ ಸಂಕಪ್ಪ ಗದಗ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಉದ್ಯೋಗವಿಲ್ಲದೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಗ್ರಾಮ ಪಂಚಾಯತಿಗಳು ತಾಂತ್ರಿಕ ದೋಷಗಳ ನೆಪ ಹೇಳಿ ಕಾರ್ಮಿಕರಿಗೆ ಕೆಲಸ ನೀಡಲು ಹಿಂದೇಟು ಹಾಕುತ್ತಿವೆ. ಫಾರಂ ನಂ. 06 ಸಲ್ಲಿಸಿ ತಿಂಗಳು ಕಳೆದರೂ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಇಡೀ ಊರಿನವರು ಅರ್ಜಿ ಸಲ್ಲಿಸಿದರೆ ಮಾತ್ರ ಕೆಲಸ ನೀಡುತ್ತೇವೆ ಎನ್ನುವ ಗ್ರಾಮ ಪಂಚಾಯತಿಗಳ ನಿಯಮಬಾಹಿರ ಧೋರಣೆಯನ್ನು ಕೈಬಿಡಬೇಕು. ಕೋಳೂರು, ಚಿಕ್ಕ ಸಿಂದೋಗಿ ಹಾಗೂ ಮಂಗಳಾಪುರ ಗ್ರಾಮಗಳ ಕಾರ್ಮಿಕರಿಗೆ ಕೂಡಲೇ ಉದ್ಯೋಗ ನೀಡಬೇಕು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಜಾಬ್​ ಕಾರ್ಡ್​ಗಳನ್ನು ವಿತರಿಸಬೇಕು ಎಂದರು.
ಲೋಪದೋಷಗಳಿಂದಾಗಿ ಹಾಗೂ ಎನ್​.ಎಂ.ಆರ್​ ನಲ್ಲಿನ ತಪ್ಪುಗಳಿಂದಾಗಿ ಕಾರ್ಮಿಕರಿಗೆ ಬರಬೇಕಾದ ಕೂಲಿ ಹಣ ಬಾಕಿ ಉಳಿದಿದೆ. ಇದನ್ನು ಕೂಡಲೇ ಪಾವತಿಸಬೇಕು. ಕೆಲಸ ಮಾಡುವ ಸ್ಥಳಗಳಲ್ಲಿ ಕುಡಿಯುವ ನೀರು, ನೆರಳು ಹಾಗೂ ಪ್ರಥಮ ಚಿಕಿತ್ಸೆಗಾಗಿ ಮೆಡಿಕಲ್​ ಕಿಟ್​ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ವ್ಯಕ್ತಪಡಿಸಿದರು.
ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಸಮಿತಿಯ ಅಧ್ಯಕ್ಷೆ ಯಲ್ಲಮ್ಮ, ಸಂಘದ ಪದಾಧಿಕಾರಿಗಳಾದ ಹುಲುಗಪ್ಪ ಗೋಕಾವಿ, ಖಾಲೆಸಾಬ ಕರಡಿ, ಮುಮ್ತಾಬೇಗಂ ಕರಡಿ, ಸೂಶಿಲಮ್ಮ, ಮಹೇಶ, ಹುಸೇನ್​ ಸಾಬ ಇತರರಿದ್ದರು.