ಕೊಪ್ಪಳ ಜಿಲ್ಲಾ ಜೆಡಿಎಸ್​ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನದ ಪೀಠಿಕೆಯ ಬೋಧನೆಯೊಂದಿಗೆ ಪ್ರತಿಜ್ಞಾವಿದಿ ಸ್ವೀಕರಿಸಲಾಯಿತು. ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜೆಡಿಎಸ್​ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಇತರರಿದ್ದರು. 
ಕೊಪ್ಪಳ

ಸಂವಿಧಾನ ಉಲ್ಲಂಘಿಸಿದವರು ದೇಶದ ಕ್ಷಮೆ ಕೇಳಲಿ: ಸಿವಿಸಿ

ಪ್ರಮುಖ ಮುಖ್ಯಾಂಶಗಳು

  • 77ನೇ ಗಣರಾಜ್ಯೋತ್ಸವ
ಕೊಪ್ಪಳ: ನೆರೆ ರಾಷ್ಟ್ರಗಳಲ್ಲಿ ದಂಗೆಗಳಿಂದಾಗಿ ಆಡಳಿತ ವ್ಯವಸ್ಥೆ ಕುಸಿತದರೂ ಭಾರತದಲ್ಲಿ ಆಡಳಿತ ವ್ಯವಸ್ಥೆ ಸುಭದ್ರವಾಗಿರುವುದಕ್ಕೆ ಕಾರಣ ಡಾ.ಬಿ.ಆರ್​.ಅಂಬೇಡ್ಕರ್​ ಅವರ ನೇತೃತ್ವದ ತಜ್ಞರು ಕೊಟ್ಟ ಸಂವಿಧಾನ ಎಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್​ ಹೇಳಿದರು.
ಜೆಡಿಎಸ್​ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.
ಇಡೀ ವಿಶ್ವದಲ್ಲಿಯೇ ಅತ್ಯಂತ ಸದೃಢ ಸಂವಿಧಾನ ಹೊಂದಿದ ಏಕೈಕ ರಾಷ್ಟ್ರ ಭಾರತ. ಅಧ್ಯಕ್ಷೀಯ ಮಾದರಿಯ ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಥಿಲಗಳು ಕಂಡುಬರುತ್ತವೆ. ಸದೃಢ ಸಂವಿಧಾನರಹಿತ ನೆರೆಯ ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳಲ್ಲಿ ಸ್ಥಿತ್ಯಂತರಗಳಾಗಿವೆ. ಜಾಗತಿಕಗಳ ತಲ್ಲಣಗಳ ನಡುವೆಯೂ ಭಾರತ ದೇಶ ಸುಭದ್ರವಾಗಿ ಇರಲು ಮುಖ್ಯ ಕಾರಣ ನಾವು ಅಳವಡಿಸಿಕೊಂಡಿರುವ ಸಂವಿಧಾನ. ಇದು ವಿಶ್ವಕ್ಕೆ ಮಾದರಿ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಹಾಗೂ ಸಂವಿಧಾನದ 356 ನೇ ವಿಧಿಯನ್ನು 90 ಕ್ಕಿಂತಲೂ ಹೆಚ್ಚು ಸಲ ದುರ್ಬಳಕೆ ಮಾಡಿಕೊಂಡು ದಶಕಗಳ ಕಾಲ ಕಾಂಗ್ರೆಸ್​ ಪಕ್ಷ ಸಂವಿಧಾನದ ಮೇಲೆ ಸವಾರಿ ನಡೆಸಿದೆ. ಕಾಂಗ್ರೆಸ್​ ನಾಯಕರು ತಮ್ಮ ಪಕ್ಷದ ಪ್ರಮಾದಕ್ಕಾಗಿ ಈಗಲಾದರೂ ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್​ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಜಾತಿ, ಕುಟುಂಬ ಹಾಗೂ ಧರ್ಮ ರಾಜಕಾರಣ ಮಾಡುತ್ತಾ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್​ ಪಕ್ಷ ಕೊಪ್ಪಳದಲ್ಲಿ ಸಂವಿಧಾನ ವಿರೋಧಿ ನೀತಿಯನ್ನು ಅಳವಡಿಸಿಕೊಂಡಿದೆ. ತಮ್ಮ ಕುಟುಂಬಕ್ಕೆ ಅನುಕೂಲವಾಗುವ ನೀತಿಗಳನ್ನು ಅನುಸರಿಸಿ ಗುತ್ತಿಗೆದಾರರು ಹಾಗೂ ವ್ಯಾಪಾರಸ್ಥರ ಪಾಲಿಗೆ ಮುಳುವಾದ ಶ್ರೇಯಸ್ಸು ಶಾಸಕ ಮತ್ತು ಸಂಸದರಿಗೆ ಸಲ್ಲುತ್ತದೆ. ಸಂವಿಧಾನದ 371(ಜೆ) ವಿಧಿಯಡಿ ನಮ್ಮ ಭಾಗಕ್ಕೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಿದರು.
ಸಂವಿಧಾನ ಪೀಠಿಕೆ ಓದಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಪೀಠಿಕೆಯನ್ನು ಓದುವ ಚಟುವಟಿಕೆಯನ್ನು ಸಂಸ್ಕತಿಯಾಗಿ ಬಳಸಬೇಕು. ಅದರಲ್ಲಿ ತಿಳಿಸಲಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಅದು ಪ್ರಜಾಪ್ರಭುತ್ವಕ್ಕೆ ತೋರಿಸುವ ನಿಜವಾದ ಗೌರವ ಎಂದರು. ಓಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಸಾಂಸತಿಕ ವಿಭಾಗ ಅಧ್ಯಕ್ಷ ಮಂಜುನಾಥ್​, ಎಸ್​ಟಿ ಮೋರ್ಚಾ ವಿಭಾಗದ ಜಿಲ್ಲಾಧ್ಯಕ್ಷ ರಮೇಶ್​ ಡಂಬ್ರಳ್ಳಿ, ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷರಾದ ವೀರೇಶಗೌಡ್ರು ದಳಪತಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ, ನಗರ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರ್ಮಲ ಎನ್​ ಮೇದಾರ್​ ಇತರರಿದ್ದರು.