ಗಂಗಾವತಿ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷರಾದ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಇತರರಿದ್ದರು.
- ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿಕೆ
- ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ
ಗಂಗಾವತಿ: ಮಾನವ ಧರ್ಮಕ್ಕೆ ಶ್ರೇಷ್ಠ ಸಂದೇಶ ನೀಡಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯೊಂದಿಗೆ ಮಂಟಪ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿ ಟ್ರಸ್ಟ್ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆನೆಗೊಂದಿ ಭಾಗದಲ್ಲಿ ಜಂಗಮ ಸಮಾಜಕ್ಕಾಗಿ ಒಂದು ಎಕರೆ ಭೂಮಿ ಖರೀದಿಸಿ, ವಿಶೇಷ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಈಗಾಗಲೇ ಸಮಾಜದವರಿಗೆ 15ಲಕ್ಷ ರೂ. ನೀಡಿದ್ದು, ಭೂಮಿ ಖರೀದಿಗೆ 55ಲಕ್ಷ ರೂ. ಶೀಘ್ರದಲ್ಲಿ ಪಾವತಿಸಲಾಗುವುದು. ನಗರದ ರಾಜ್ಯ ಹೆದ್ದಾರಿಯಲ್ಲಿ ವೃತ್ತ ವಿವಾದ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿಲ್ಲ, ಅಡ್ಡಿಯೂ ಪಡಿಸಿಲ್ಲ. ವೃತ್ತ ನಿರ್ಮಾಣದೊಂದಿಗೆ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸಂಘಟನಾತ್ಮಕವಾಗಿ ಸಮಾಜವನ್ನು ಅಭಿವೃದ್ಧಿಪಡಿಸಬೇಕಿದ್ದು, ಮಾನವ ಧರ್ಮಕ್ಕೆ ಜಯವಾಗಲಿ ಸಂದೇಶ ನೀಡಿದ ಶ್ರೀ ರೇಣುಕಾಚಾರ್ಯರು ಎಲ್ಲ ಸಮುದಾಯಕ್ಕೂ ಆರಾಧ್ಯ ದೇವರು ಎಂದರು.
ಹೆಬ್ಬಾಳ ಬೃಹನ್ಮಠದ ನಾಗಭೂಷಣಶಿವಾಚಾರ್ಯರು, ಹಂಪಸದುರ್ಗಾದ ಶಿವಲಿಂಗ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಹಿರಿಯ ವಕೀಲ ಎಸ್.ಎಸ್.ಪಟ್ಟಣಶೆಟ್ಟಿ, ಉದ್ಯಮಿ ಅಜರ್ ಅನ್ಸಾರಿ, ಜಂಗಮ ಸಮಾಜದ ಮುಖಂಡರಾದ ಬಸವರಾಜ ಸ್ವಾಮಿ ಮಳೀಮಠ, ಕೆ.ಚನ್ನಬಸಯ್ಯಸ್ವಾಮಿ, ಶರಣಯ್ಯಸ್ವಾಮಿ ಮರಳೀಮಠ, ಶರಭೇಂದ್ರಸ್ವಾಮಿ, ಮಹಾಂತೇಶ ಶಾಸೀಮಠ, ಡಿ.ಜಿ.ಮಠದ, ಕವಿತಾ ಗುರುಮೂರ್ತಿ, ದೊಡ್ಡಬಸಪ್ಪ ಗುರುವಿನ್‌ಮಠ ಇತರರಿದ್ದರು.
ಇದಕ್ಕೂ ಮೊದಲು ಶ್ರೀ ರೇಣುಕಾಚಾರ್ಯರ ಮೂರ್ತಿಯನ್ನು ನಗರದ ಕಲ್ಮಠದಿಂದ ಸಿಬಿಎಸ್ ಕಲ್ಯಾಣ ಮಂಟಪದವರಿಗೆ 108 ಕುಂಭ ಮತ್ತು ನಂದಿಕೇಶ್ವರ ಭಜನಾ ಮಂಡಳಿ ನೇತೃತ್ವದಲ್ಲಿ ಅದ್ದೂರಿಯಾಗಿ ಮೆರವಣಿಗೆ ನೆರವೇರಿಸಲಾಯಿತು.