ಗಂಗಾವತಿ: ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಅನುದಾನವನ್ನು ಆದ್ಯತೆ ಮೇರೆಗೆ ದೇವಾಲಯಗಳಿಗೆ ನೀಡಿದ್ದು, ದುರ್ಬಳಕೆಗೆ ಅವಕಾಶ ನೀಡಲ್ಲ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2023, 2024 ಮತ್ತು 2025-26ನೇ ಸಾಲಿನಲ್ಲಿ 6 ಕೋಟಿ ರೂ.ಗಳ ದೇವಾಲಯ ಜೀರ್ಣೋದ್ಧಾರ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಿದ್ದು, ಇನ್ನೂ ಕೆಲ ಕಾಮಗಾರಿ ಬಾಕಿಯಿವೆ. ದೇವರ ಮೇಲೆ ನಂಬಿಕೆಯನ್ನಿಟ್ಟಿರುವ ನಾನು, ದೇವಾಲಯದ ಹಣ ದುರ್ಬಳಕೆ ಮಾಡಿಕೊಳ್ಳುವಂತಹ ಮನಸ್ಥಿತಿ ಇಲ್ಲ. ಕಾಮಗಾರಿ ನಿರ್ವಹಣೆ ಕುರಿತು ಪರಿಶೀಲಿಸಲು ಬೆಂಬಲಿಗರ ತಂಡವನ್ನು ಕಳೆದ ಮೂರ‌್ನಾಲ್ಕು ದಿನಗಳಿಂದ ಕ್ಷೇತ್ರಾದ್ಯಂತ ತಿರುಗಾಡಿಸಿದ್ದೇನೆ. ಕೆಲ ದೇವಾಲಯಗಳಿಗೆ ಹೊಂದಾಣಿಕೆ ಆಧಾರದಡಿ ಅನುದಾನ ನೀಡಿದ್ದು, ಕಾಮಗಾರಿಗೆ ಬಳಸಿಕೊಳ್ಳಲು ತಿಳಿಸಿದ್ದೇನೆ. ಅಂತಹ ಕಾಮಗಾರಿ ನಿರ್ವಹಿಸದಿದ್ದರೆ ಅನುದಾನ ವಾಪಸ್ ಪಡೆಯಲಾಗುವುದು.
ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರಾದ್ಯಂತ ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳಿಗೆ 10ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದ್ದೇನೆ. ಅನುದಾನ ದುರ್ಬಳಕೆ ದೂರುಗಳು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಶಿಾರಸು ಮಾಡುತ್ತೇನೆ ಎಂದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್, ಉಪಾಧ್ಯಕ್ಷ ಮನೋಹರಗೌಡ ಹೇರೂರು, ಪದಾಧಿಕಾರಿಗಳಾದ ಚಂದ್ರು ಹಿರೂರ್, ಡಿ.ಕೆ.ಆಗೋಲಿ, ಯಮನೂರಿಚೌಡ್ಕಿ, ವೀರೇಶ ಬಲ್ಕುಂದಿ ಇತರರಿದ್ದರು. ಈ ಕುರಿತು ವಿಜಯವಾಣಿ ಆ.19ರಂದು ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುಮೋಟೋ ಪ್ರಕರಣ ದಾಖಲಿಸಲಿ
ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಇಲಾಖೆ ಅಧಿಕಾರಿಗಳನ್ನು ಹಣ ಪಡೆದು ವರ್ಗಾವಣೆ ಮಾಡುತ್ತಿರುವ ಬಗ್ಗೆ ಅದೇ ಪಕ್ಷದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪ ಮಾಡಿದ್ದಾರೆ. ಲೋಕಾಯುಕ್ತ ಸಂಸ್ಥೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಬೇಕು. ಮಾಜಿ ಮತ್ತು ಹಾಲಿ ಸಚಿವರ ನಡುವಿನ ಗುದ್ದಾಟದಲ್ಲಿ ಅಧಿಕಾರಿಗಳು ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಈಗಾಗಲೇ ಬಂದ ಕೆಲ ಅಧಿಕಾರಿಗಳು ಕಣ್ಣೀರಿಡುತ್ತಿದ್ದಾರೆ ಎಂದರು. ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಹೋರಾಟ ಮುಂದುವರಿಯಲಿದೆ ಎಂದರು.