ತಹಸೀಲ್ದಾರ್ ರವಿಕುಮಾರ ವಸ್ತ್ರದ್‌ಗೆ ಕರವೇ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಘಟಕದ ಅಧ್ಯಕ್ಷ ಹರೀಶ ಪೂಜಾರ ಹಾಗೂ ನಗರ ಘಟಕದ ಅಧ್ಯಕ್ಷ ಬಸವರಾಜ ಕೋರಿ, ನಾಗೇಶ ಬಡಿಗೇರ, ಅಂಬರೇಶ ಇದ್ದರು.
ಕನಕಗಿರಿ: ಪಟ್ಟಣದ ರಾಜಬೀದಿಯಲ್ಲಿನ ಒತ್ತುವರಿ ತೆರವು ಹಾಗೂ ಎಪಿಎಂಸಿ ಕಾಂಪೌಂಡ್ ಮರು ನಿರ್ಮಾಣ ಮಾಡಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ತಹಸೀಲ್ದಾರ್ ರವಿಕುಮಾರ ವಸ್ತ್ರದ್‌ಗೆ ಮಂಗಳವಾರ ಮನವಿ ಸಲ್ಲಿಸಿತು.
ತಾಲೂಕು ಘಟಕದ ಅಧ್ಯಕ್ಷ ಹರೀಶ ಪೂಜಾರ ಹಾಗೂ ನಗರ ಘಟಕದ ಅಧ್ಯಕ್ಷ ಬಸವರಾಜ ಕೋರಿ ಮಾತನಾಡಿ, ಕನಕಗಿರಿ ಪಟ್ಟಣದಲ್ಲಿ 2025ರ ಜ.18 ರಂದು ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ವಾಲ್ಮೀಕಿ ವೃತ್ತದಿಂದ ನವಲಿ ರಸ್ತೆ, ತಾವರಗೇರಾ ರಸ್ತೆ, ಬಸ್ ನಿಲ್ದಾಣದ ರಸ್ತೆ ಗಂಗಾವತಿ ರಸ್ತೆಯ ಪುಟ್‌ಪಾತ್‌ನಲ್ಲಿನ ಬಡವರ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ವರ್ಷವಾದರೂ ಇದುವರೆಗೂ ಅಭಿವೃದ್ಧಿಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುಟ್‌ಪಾತ್ ತೆರವಿನಿಂದ ದುಡಿಯುವ ವರ್ಗದ ಬಡವರು ಬೀದಿಪಾಲಾಗಿದ್ದಾರೆ. ಉಳ್ಳವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪುಟ್‌ಪಾತ್ ತೆರವಿನ ನೆಪದಲ್ಲಿ ಎಪಿಎಂಸಿಗಿದ್ದ ಕಾಂಪೌಂಡ್ ತೆರವು ಮಾಡಿ ಎಪಿಎಂಸಿಯಲ್ಲಿನ ಪ್ರಭಾವಿಗಳ ಮಳಿಗೆಗಳನ್ನು ಮುಖ್ಯರಸ್ತೆಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಒಂದೆಡೆ ಪ್ರಭಾವಿಗಳ ಮಳಿಗೆಗಳಿಗೆ ಅನುಕೂಲ ಮಾಡಲು ತೆರವು ಕಾಂಪೌಂಡ್ ತೆರವು ಮಾಡಿದ ಅಧಿಕಾರಿಗಳು ಅದೇ ಹಲವು ಪ್ರಭಾವಿಗಳು ಒತ್ತುವರಿ ಮಾಡಿರುವ ರಾಜಬೀದಿಯನ್ನು ತೆರವು ಮಾಡದೇ ತಾರತಮ್ಯ ನೀತಿ ಅನುಸರಿಸುತ್ತಿರುವುದು ಯಾವ ನ್ಯಾಯ? ಕೂಡಲೇ ರಾಜಬೀದಿಯಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನು, ಅಂಗಡಿಗಳನ್ನು, ಮೆಟ್ಟಿಲುಗಳನ್ನು ತೆರವುಗೊಳಿಸಬೇಕು ಹಾಗೂ ಪ್ರಭಾವಿಗಳ ಅನುಕೂಲಕ್ಕಾಗಿ ತೆರವುಗೊಳಿಸಿರುವ ಎಪಿಎಂಸಿ ಕಾಂಪೌಂಡ್ ಮರು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.