ಗಂಗಾವತಿ ಸಾಹಿತಿ ಪವನಕುಮಾರ ಗುಂಡೂರು ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಜಾಗೃತಿ ಸಮಿತಿಯಿಂದ ಭಾನುವಾರ ಹಮ್ಮಿಕೊಂಡ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸ ಮಾತನಾಡಿದರು. ಪ್ರಾಧಿಕಾರ ಸದಸ್ಯ ಡಾ.ಶರಣಬಸಪ್ಪ ಕೋಲ್ಕಾರ್, ವಿಜಯವಾಣಿ ಸ್ಥಾನಿಕ ಸಂಪಾದಕ ಜಗನ್ನಾಥ ಆರ್. ದೇಸಾಯಿ, ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್, ಕಸಾಪ ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್ ಇತರರಿದ್ದರು. 
ಕೊಪ್ಪಳ

ಪುಸ್ತಕ ಓದಿನಿಂದ ನೆಮ್ಮದಿಯ ಬದುಕು ಸಾಧ್ಯ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಗ್ರಂಥಾಲಯ
  • ಅನುಷ್ಠಾನ
  • ಸಮಾರಂಭ
ಗಂಗಾವತಿ: ಮೊಬೈಲ್ ಕಾಲದ ಒತ್ತಡದ ಬದುಕಿನಲ್ಲಿ ಓದುವುದನ್ನು ಮರೆಯುತ್ತಿದ್ದು, ಪುಸ್ತಕ ಓದುವುದನ್ನು ರೂಢಿಸಿಕೊಂಡರೆ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸ ಹೇಳಿದರು.
ಸಾಹಿತಿ ಪವನಕುಮಾರ ಗುಂಡೂರು ಅವರ ನಗರದ ಸತ್ಯನಾರಾಯಣ ಪೇಟೆಯ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಜಾಗೃತಿ ಸಮಿತಿಯಿಂದ ಭಾನುವಾರ ಹಮ್ಮಿಕೊಂಡ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಮಾತನಾಡಿದರು.
ಮನೆಯಲ್ಲಿ ಪೂಜೆ ಕೊಠಡಿಯಿದ್ದಂತೆ ಜ್ಞಾನದ ಕೊಠಡಿಯಿದ್ದರೆ ಪುಸ್ತಕ ಓದುವುದು ರೂಢಿಯಲ್ಲಿ ಬರುತ್ತದೆ. ಧ್ಯಾನ ಮನಸ್ಸಿಗೆ ಸ್ನಾನ ಮಾಡಿಸಿದಂತೆ. ಅದರಂತೆ ಪುಸ್ತಕ ಓದುವುದು ಒಂದು ಧ್ಯಾನದಂತಿದ್ದು, ಧಾವಂತದ ಬದುಕನ್ನು ದೂರ ಮಾಡಬಹುದಾಗಿದೆ. ಐಷಾರಾಮಿ ಮನೆಯಲ್ಲಿ ಗ್ರಂಥಾಲಯವಿದ್ದರೆ ಜ್ಞಾನ ಸಂಸ್ಕೃತಿಯ ಕಳಶವಿಟ್ಟಂತೆ. ಪ್ರತಿಯೊಬ್ಬರು ಮನೆಯಲ್ಲಿ ಗ್ರಂಥಾಲಯವನ್ನು ಅನುಷ್ಠಾನಗೊಳಿಸಬೇಕಿದೆ. ಪುಸ್ತಕ ಸಂಗ್ರಹದಿಂದ ಹಲವು ಕುಟುಂಬಗಳಿಗೆ ಬದುಕಿಗೆ ದಾರಿಯಾಗಲಿದ್ದು, ಸಾಹಿತಿಯಿಂದ ವಿತರಕರಿಗೂ ಅನುಕೂಲವಾಗಲಿದೆ. ರಾಜ್ಯದಲ್ಲಿ ಒಂದು ಲಕ್ಷ ಗ್ರಂಥಾಲಯ ಅನುಷ್ಠಾನದ ಗುರಿಯಿದ್ದು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಮನೆಯಲ್ಲೂ ಅನುಷ್ಠಾನಗೊಳಿಸಲಾಗುವುದು ಎಂದರು.
ಪ್ರಾಧಿಕಾರ ಸದಸ್ಯ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ಪ್ರಾಚೀನ ಕಾಲದಿಂದಲೂ ಸಾಹಿತ್ಯ ಮತ್ತು ಓದುವಿಕೆಗೆ ವಿಶೇಷ ಮಾನ್ಯತೆಯಿದ್ದು,ಮನೆಯಲ್ಲೊಂದು ಪುಸ್ತಕವಿದ್ದರೆ, ಬಿಡುವಿನ ವೇಳೆ ಓದುವ ಆಸಕ್ತಿ ಹೆಚ್ಚಾಗಲಿದೆ. ಓದುವ ಹವ್ಯಾಸ ಹೆಚ್ಚಿಸುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಯೋಜನೆ ಪ್ರಾಧಿಕಾರ ಜಾರಿಗೆ ತಂದಿದ್ದು, ವೈಜ್ಞಾನಿಕ ತಳಹದಿಯ ಗ್ರಂಥಾಲಯ ಚಳವಳಿ, ಮನೆಮನಗಳಿಗೆ ಜ್ಞಾನ ಬಳುವಳಿಯಾಗಲಿದೆ ಎಂದರು.
ಸಿಎಂ ಚಿನ್ನದ ಪದಕ ಪುರಸ್ಕೃತ ಪಿಐ ಪ್ರಕಾಶ ಎಲ್.ಮಾಳಿ, ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಸವಿತಾ ವಂದಲ, ಸಾಹಿತಿ ಪವನಕುಮಾರ ಗುಂಡೂರು ಮತ್ತು ವೈಷ್ಣವಿ ದಂಪತಿಯನ್ನು ಸನ್ಮಾನಿಸಲಾಯಿತು.
ವಿಜಯವಾಣಿ ಸ್ಥಾನಿಕ ಸಂಪಾದಕ ಜಗನ್ನಾಥ ಆರ್. ದೇಸಾಯಿ, ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ, ಸಾಹಿತಿ ನಾಗಭೂಷಣ ಅರಳಿ, ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫೀ, ಪತ್ರಕರ್ತ ರಮೇಶಬಾಬು ಸುರ್ವೇ ಇತರರಿದ್ದರು. ಎಸ್‌ಕೆಎನ್‌ಜಿ ಕಾಲೇಜು ಉಪನ್ಯಾಸಕ ರವಿ ಹಾದಿಮನಿ ನಿರ್ವಹಿಸಿದರು. ಇದಕ್ಕೂ ಮುನ್ನ ಡಾ.ಶಿವಕುಮಾರ ಮಾ.ಪಾಟೀಲ್, ಗ್ರಂಥಪಾಲಕ ರಮೇಶ ಗಬ್ಬೂರ್ ನಿವಾಸದಲ್ಲೂ ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು.
"

ಮೊಬೈಲ್ ಯುಗದಲ್ಲಿ ಓದುವುದು ದೂರವಾಗುತ್ತಿದ್ದು, 90ರ ದಶಕದಲ್ಲಿ ಪುಸ್ತಕ ಓದುವುದಕ್ಕಾಗಿಯೇ ಗ್ರಂಥಾಲಯದ ಬಾಗಿಲು ತೆರೆಯುವುದನ್ನು ಕಾಯುತ್ತಿದ್ದೇವು. ಪುಸ್ತಕ ಓದುವುದನ್ನು ರೂಢಿಸಿಕೊಳ್ಳುವುದು ಉತ್ತಮ ಹವ್ಯಾಸ.