ಕನಕಗಿರಿ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಶರಣಬಸಪ್ಪ ಕೋಲ್ಕಾರ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಭಜರಂಗ ಬಲಿ, ನಿವೃತ್ತ ಪಿಡಿಒ ಬಿ. ವಿರುಪಣ್ಣ ಢಣಾಪುರ, ತಾವರಗೇರಾ ಸ.ಪ್ರ.ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವೆಂಕಟೇಶ ಇತರರಿದ್ದರು.
- ಡಾ.ಶರಣಬಸಪ್ಪ ಕೋಲ್ಕಾರ ಅಭಿಮತ
- ಕನಕಗಿರಿ ಅಭಿಪ್ರಾಯ ಮಂಡನೆ ಉಪನ್ಯಾಸ
ಕನಕಗಿರಿ: ಮನುಷ್ಯನ ಪ್ರಗತಿಗೆ ಅವಶ್ಯವಾದ ಜ್ಞಾನ, ವಿವೇಕ ಹಾಗೂ ವೈಚಾರಿಕತೆಯನ್ನು ಓದುವಿಕೆಯು ತುಂಬುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಶರಣಬಸಪ್ಪ ಕೋಲ್ಕಾರ ಹೇಳಿದರು.
ಇಲ್ಲಿನ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಯನ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ‘ನನ್ನ ಮೆಚ್ಚಿನ ಪುಸ್ತಕ’ ವಿಷಯದ ಕುರಿತು ಶನಿವಾರ ಹಮ್ಮಿಕೊಂಡಿದ್ದ ಅಭಿಪ್ರಾಯ ಮಂಡನೆ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದರಿಂದ ಪುಸ್ತಕಗಳನ್ನು ಓದುವ ಸಂಸ್ಕೃತಿ ಕಡಿಮೆಯಾಗಿದೆ. ಇದರಿಂದ ಮನೋದೈಹಿಕ ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಪುಸ್ತಕ ಓದು ನಮ್ಮಲ್ಲಿ ಲವಲವಿಕೆ, ಜೀವನೋತ್ಸಾಹ ತುಂಬುವ ಕೆಲಸ ಮಾಡುತ್ತದೆ. ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಸಂಪತ್ತು, ಕೀರ್ತಿ ಹಾಗೂ ಜ್ಞಾನ ಈ ಮೂರನ್ನೂ ನೀಡಬಲ್ಲ ಶಕ್ತಿಯನ್ನು ಪುಸ್ತಕಗಳು ಹೊಂದಿವೆ ಎಂದರು.
ಸಂಪನ್ಮೂಲ ವ್ಯಕ್ತಿ, ಹಿಟ್ನಾಳ ಸ.ಪ್ರ.ದ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಕಂಬಳಿ ಉಪನ್ಯಾಸ ನೀಡಿ, ಇಂದಿನ ದಿನಗಳಲ್ಲಿ ಪಠ್ಯಪುಸ್ತಕಗಳ ಜ್ಞಾನ ಕೇವಲ ಪರೀಕ್ಷೆಗಳಿಗೆ ಹಾಗೂ ಪ್ರಮಾಣ ಪತ್ರಗಳಿಗೆ ಸೀಮಿತ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಜೀವನದ ಮೂಲ ಮೌಲ್ಯಗಳನ್ನು ಕಲಿಯುವಲ್ಲಿ ಇಂದಿನ ಯುವಜನತೆ ವಿಫಲವಾಗುತ್ತಿರುವುದರಿಂದಲೇ ಸಮಾಜದಲ್ಲಿ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಾಗೂ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿವೆ. ಜೀವನ ಮೌಲ್ಯಗಳನ್ನು ಅರಿತುಕೊಳ್ಳಲು, ಮನುಷ್ಯ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಪುಸ್ತಕ ಓದು ತುಂಬಾ ಮುಖ್ಯ ಎಂದು ತಿಳಿಸಿದರು.
ಅಭಿಪ್ರಾಯ ಮಂಡನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ನಾಗರಾಜ ಗಡ್ಡಿ, ದ್ವಿತೀಯ ಸ್ಥಾನ ಪಡೆದ ಶಶಿಕಲಾ ಹಾಗೂ ತೃತೀಯ ಸ್ಥಾನ ಪಡೆದ ಸಾನಿಯಾಗೆ ಬಹುಮಾನ ನೀಡಲಾಯಿತು. ಪ್ರಾಧ್ಯಾಪಕರಾದ ಲಲಿತಾ.ಎನ್.ಕೆ., ಸರ್ವಮಂಗಳಮ್ಮ.ಟಿ.ಆರ್., ಅಮರೇಶ ವೆಂಕಟಾಪುರ, ರಕ್ಷಿತ್ ಎ., ನಫೀಸಾ ಬಾನು, ಸಂಗಮೇಶ, ಡಾ.ಗೋಪಾಲರೆಡ್ಡಿ ಮಾದಿನಾಳ ಇತರರಿದ್ದರು.