ಕೊಪ್ಪಳದ ಜಿಲ್ಲಾ ರಂಗ ಮಂದಿರ ಕಟ್ಟಡದ ಹೊರನೋಟ./ ಕೊಪ್ಪಳದ ಜಿಲ್ಲಾ ರಂಗ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿರುವುದು./ ಕಸದ ಗೂಡಾಗಿರುವ ನೂತನ ರಂಗ ಮಂದಿರದ ಹಾಲ್. 
ಕೊಪ್ಪಳ

ರಂಗಾಗದ ರಂಗ ಮಂದಿರ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಒಂದೂವರೆ ದಶಕ ಕಳೆದರೂ ಕಾಮಗಾರಿ ಅಪೂರ್ಣ
  • ಕನ್ನಡ ಮತ್ತು ಸಂಸ್ಕೃತಿ ಸಚಿವರ ತವರಲ್ಲೇ ದುಸ್ಥಿತಿ
ಕೊಪ್ಪಳ: ಜಿಲ್ಲೆಯ ಸಾಂಸ್ಕೃತಿಕ ಬದುಕಿನ ಪ್ರತಿಬಿಂಬವಾಗಬೇಕಿದ್ದ ಜಿಲ್ಲಾ ರಂಗಮಂದಿರ ದಶಕ ಕಳೆದರೂ ಉದ್ಘಾಟನೆ ಭಾಗ್ಯ ಕಾಣದೆ ಸೊರಗುತ್ತಿದೆ. ಇನ್ನು ಜಿಲ್ಲೆಯಲ್ಲೇ ವಾತೃ ಇಲಾಖೆ ಸಚಿವರಿದ್ದರೂ, ಈ ಕಟ್ಟಡ ವಾತ್ರ ಕಲಾವಿದರಿಗೆ ಲಭ್ಯವಾಗದರುವುದು ವಿಪರ್ಯಾಸ.
2011ರಲ್ಲಿ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಸ.ನಂ.251/3 ರಲ್ಲಿ 28.96 ಲಕ್ಷ ರೂ. ಪಾವತಿಸಿ ಎರಡು ಎಕರೆ ಜಮೀನು ಖರೀದಿಸಿ ಜಾಗವನ್ನು ಇಲಾಖೆ ಹೆಸರಿಗೆ ನೋಂದಾಯಿಸಲಾಯಿತು. ಅದೇ ವರ್ಷ ಅದ್ದೂರಿಯಾಗಿ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು. ಆದರೆ, 15 ವರ್ಷಗಳ ಕಾಲಗತಿಸಿದರೂ, ಈ ಯೋಜನೆಗೆ ವಾತ್ರ ಮುಕ್ತಿ ಸಿಕ್ಕಿಲ್ಲ.
ಹೊರನೋಟಕ್ಕೆ ಕಟ್ಟಡವು ಸಿದ್ಧವಾಗಿರುವಂತೆ ಕಂಡರೂ, ಒಳಾಂಗಣ ವಿನ್ಯಾಸ, ಆಸನಗಳ ವ್ಯವಸ್ಥೆ ಮತ್ತು ಅಂತಿಮ ಹಂತದ ಕೆಲಸಗಳು ಅರ್ಧಕ್ಕೆ ನಿಂತಿವೆ. ಸಾವಿರಾರು ಆಸನಗಳ ಸಾಮರ್ಥ್ಯದ ಈ ಸುಸಜ್ಜಿತ ರಂಗಮಂದಿರವು ಕಲಾವಿದರ ಚಟುವಟಿಕೆಗಳಿಂದ ಗಿಜಿಗುಡಬೇಕಿತ್ತು. ಆದರೆ, ಇಂದು ಅನಾಥವಾಗಿ ಬಿಕೋ ಎನ್ನುತ್ತಿದೆ. ಹೀಗಾಗಿ ಅಪೂರ್ಣ ಇರುವ ರಂಗಮಂದಿರ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ, ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲ ಕಲ್ಪಿಸಲಿ ಎನ್ನುವುದು ಕಲಾವಿದರ ಮತ್ತು ಕಲಾಸಕ್ತರ ಆಗ್ರಹವಾಗಿದೆ.
ಸಾಹಿತ್ಯ ಭವನ ಆಸರೆ: ಜಿಲ್ಲೆಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ವೇದಿಕೆಯಿಲ್ಲದೆ ಕಲಾವಿದರು ಪರದಾಡುತ್ತಿದ್ದಾರೆ. ಈ ಹಿಂದೆ ಕೊಪ್ಪಳ ಜಿಲ್ಲೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಆಚರಣೆಗೆ ಜಾಗವಿಲ್ಲದೇ ಪರದಾಡುವಂತಾಯಿತು. ಅಂತಿಮವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಡಿದ್ದನ್ನು ಸ್ಮರಿಸಬಹುದು. ಇನ್ನು ಕೊಪ್ಪಳ ಹೃದಯ ಭಾಗದಲ್ಲಿರುವ ಸಾಹಿತ್ಯ ಭವನವೇ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಸರೆಯಾಗಿದೆ. ಇಲ್ಲಿ ಪಾರ್ಕಿಂಗ್ ಇನ್ನಿತರ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಬೃಹತ್ ಕಾರ್ಯಕ್ರಮಗಳು ತಾಲೂಕು ಅಥವಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತವೆ. ನಮ್ಮ ಜಿಲ್ಲೆಯವರೇ ಸಚಿವರಾಗಿದ್ದರೂ ರಂಗಮಂದಿರಕ್ಕೆ ಈ ಗತಿ ಬಂದಿರುವುದು ಬೇಸರದ ಸಂಗತಿ ಎಂಬುದು ಸ್ಥಳೀಯ ಕಲಾವಿದರ ಅಳಲು.
"

ಕೊಪ್ಪಳ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಆದರೆ, ಕಲಾವಿದರಿಗೆ ಕಲೆ ಪ್ರದರ್ಶಿಸಲು ದೊಡ್ಡ ವೇದಿಕೆಗಳ ಕೊರತೆ ಇದೆ. ಜಿಲ್ಲಾ ರಂಗ ಮಂದಿರ ಪೂರ್ಣಗೊಂಡಲ್ಲಿ ಕಲಾವಿದರಿಗೆ ಅನುಕೂಲವಾಗಲಿದೆ. ಸಚಿವರು ಹಾಗೂ ಅಧಿಕಾರಿಗಳು ಆದಷ್ಟು ಬೇಗ ಉದ್ಘಾಟನೆಗೆ ಕ್ರಮವಹಿಸಲಿ.

"

ಇತ್ತೀಚೆಗೆ ಜಿಲ್ಲಾಧಿಕಾರಿ ಅವರು ರಂಗ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಕಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಉದ್ಘಾಟನೆ ಮಾಡುತ್ತೇವೆ.