ಕುಕನೂರಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಯ ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಅಧ್ಯಕ್ಷ ಸಂಗಮೇಶ ಗುತ್ತಿ ಮಾತನಾಡಿದರು.  
ಕೊಪ್ಪಳ

ಗೃಹಜ್ಯೋತಿ ಪರಿಷ್ಕರಣೆ ಜಾಗೃತಿ ಮೂಡಿಸಿ

ಕುಕನೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿಗಳಿಂದ ಬಡವರ ಜೀವನ ಸುಧಾರಣೆಯಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಹೇಳಿದರು.  

ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಯನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.  ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. 
ತಾಪಂ ಇಒ ಬೆಟದೇಶ್ ಮಾಳೆಕೊಪ್ಪ ಮಾತನಾಡಿ, ಯುವ ನಿಧಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ 688 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಕೆಲವರು ಯುವನಿಧಿ ಬರುವುದಿಲ್ಲವೆಂದು ಕೌಶಲ ತರಬೇತಿ ಕಾರ್ಯಾಗಾರಕ್ಕೆ ಸೇರಲು ಹಿಂದೇಟು ಹಾಕುತ್ತಿದ್ದಾರೆ ಎಂದರು. 

ಭಾರತ್ ಜೋಡೋ ಯೋಜನೆಯಡಿ ಯುವ ಸಂಘ ರಚನೆ ಮಾಡಲು ಪ್ರತಿ ಗ್ರಾಪಂ ಮತ್ತು ಪಟ್ಟಣದ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಪ್ರತಿ ಗ್ರಾಪಂಗೆ 100 ಜನರಿಗೆ ಒಂದು ಸಂಘ ರಚನೆ ಮಾಡಬೇಕಿದೆ. ಕುಕನೂರು ಪಟ್ಟಣದಲ್ಲಿ 22 ಸಾವಿರ ಯುವಜನಸಂಖ್ಯೆ ಇದ್ದು, 5 ಸಂಘಗಳನ್ನು ರಚಿಸಬೇಕಿದೆ. ಈಗಾಗಲೇ 527 ಯುವಕರು ನೋಂದಾಯಿಸಿದ್ದಾರೆ ಎಂದರು. 

ಸಮಿತಿ ಸದಸ್ಯರಾದ ವಜೀರಸಾಬ್ ತಳಕಲ್, ಮಹೇಶ ಯರಾಶಿ, ಸಿರಾಜುದ್ದೀನ್ ಮಾತನಾಡಿ, ಸಚಿವ ಬಸವರಾಜ ರಾಯರಡ್ಡಿ ಅವರ ಗ್ರಾಮ  ತಳಕಲ್ ಸೇರಿ ವಿವಿಧ ಗ್ರಾಮಗಳಿಂದ ತಾಲೂಕು ಕೇಂದ್ರ ಕುಕನೂರಿಗೆ ಬರಲು ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು, ಜನರು ಖಾಸಗಿ ವಾಹನ ಅವಲಂಬಿಸಬೇಕಾಗಿದ್ದು, ಬಸ್ ಸೌಲಭ್ಯ ಕಲ್ಪಿಸಬೇಕು. ಅನ್ನಭಾಗ್ಯ ಯೋಜನೆಯಡಿ ವೃದ್ಧರ ಮನೆಗೆ ಹೋಗಿ ಪಡಿತರ ನೀಡಬೇಕೆಂಬ ಆದೇಶವಿದ್ದರೂ ಪಾಲನೆ ಆಗುತ್ತಿಲ್ಲ ಎಂದು ಸಭೆಯ ಗಮನ ಸೆಳೆದರು.
ಪಪಂ ಮುಖ್ಯಾಧಿಕಾರಿ ನಾಗೇಶ, ಎಇಇ ನಾಗರಾಜ, ಶ್ರೀಧರ ದೇಸಾಯಿ, ಬಸವರಾಜ, ಪ್ರಕಾಶ ಕಮತರ, ಸಂತೋಷ ಮೆಣಸಿನಕಾಯಿ, ಸುರೇಶ ಮಾಗಳೇಶ, ಮಹಾದೇವಿ ಮಾಳೆಕೊಪ್ಪ, ಜಿಲ್ಲಾ ಉದ್ಯೋಗ ಅಧಿಕಾರಿ ಶಿವಯೋಗಿ ಹೊಸಳ್ಳಿ, ತಾಪಂ ಯೋಜನಾಧಿಕಾರಿ ಆನಂದ ಗೊರೂರು, ಸಿಡಿಪಿಒ ಮಾದವಿ ವೈದ್ಯ, ಪಿಡಿಒಗಳಾದ ವೈಜನಾಥ ಪಾಟೀಲ್, ನೀಲಂ ಚೆಳಗೇರಿ, ಸಿದ್ದನಗೌಡ ರಬ್ಬನಗೌಡ, ಶೇಕ್‌ಸಾಬ್ ಇತರರಿದ್ದರು.

ನಮ್ಮನ್ನೂ ದೆಹಲಿಗೆ ಕರೆದೊಯ್ಯಿರಿ

ಗ್ಯಾರಂಟಿ ಸಮಿತಿ ಸದಸ್ಯರಾಗಿ ಎರಡು ವರ್ಷವಾಗಿದೆ. ಆದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕೆಲ ಸದಸ್ಯರನ್ನು ದೆಹಲಿ ಇತರ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ನಮ್ಮನ್ನು ಕರೆದುಕೊಂಡು ಹೋಗಬೇಕು ಎಂದು ಕೆಲವರು ಸಭೆಯಲ್ಲಿ ಅಧ್ಯಕ್ಷರನ್ನು ಕೋರಿದರು.