ಕೊಪ್ಪಳ ತಾಲೂಕಿನ ಹಿರೇ ಸಿಂದೋಗಿಯಲ್ಲಿ ಗುರುವಾರ ಸುರಿದ ಮಳೆಗೆ ಸಂತೆಯಲ್ಲಿನ ತರಕಾರಿ ನೀರಿನಲ್ಲಿ ಮುಳುಗಿದ್ದು.  
ಕೊಪ್ಪಳ

ಆಶಾ ಭಾವನೆ ಮೂಡಿಸಿದ ವರುಣ

ಪ್ರಮುಖ ಮುಖ್ಯಾಂಶಗಳು

  • ಕೊಪಣಗಿರಿ ಜನತೆಗೆ ತಂಪೆರೆದ ಮಳೆ
ಕೊಪ್ಪಳ : ತೀವ್ರ ಮಳೆ ಕೊರತೆಯಿಂದ ಕಂಗಾಲಾಗಿದ್ದ ಜನತೆಗೆ ಗುರುವಾರ ಸಂಜೆ ಸುರಿದ ವರ್ಷಧಾರೆ ಕೊಂಚ ಆಶಾಭಾವನೆ ಮೂಡಿಸಿದೆ. ಜೂನ್​, ಜುಲೈ ಅರ್ಧದವರೆಗೂ ಹನಿ ಮಳೆಯೂ ಸುರಿಯದ ಕಾರಣ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಬೆಳಗಿನಿಂದ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆಗೆ ದಟ್ಟ ಮೋಡಗಳು ಆವರಿಸಿ ಕೆಲ ಕಾಲ ವರ್ಷಧಾರೆಯಾಯಿತು. ಕೊಪ್ಪಳ ನಗರ, ಸಿಂದೋಗಿ, ಹಾಲವರ್ತಿ ಸೇರಿ ವಿವಿಧ ಗ್ರಾಮೀಣ ಭಾಗಗಳಲ್ಲಿ ಕೆಲಹೊತ್ತು ವರುಣನ ಸಿಂಚನ ಕಾಣಿಸಿತು. ಬೀದಿ ಬದಿ ವ್ಯಾಪಾರಿಗಳು ನೆನೆಯುವಂತಾಯಿತು. ಚರಂಡಿಗಳು ತುಂಬಿ ಹರಿದವು.
ಹಿರೇ ಸಿಂದೋಗಿ ಗ್ರಾಮದಲ್ಲಿ ಸಂತೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವ್ಯಾಪಾರಕ್ಕೆ ಕುಳಿತಿದ್ದ ವ್ಯಾಪಾರಿಗಳು ಮಳೆಗೆ ಸಿಲುಕಿದರು. ನೀರಿನ ಪ್ರಮಾಣ ಹೆಚ್ಚಿ, ತರಕಾರಿ ನೀರಿನಲ್ಲಿ ಮುಳುಗುವಂತಾಯಿತು. ಬಹು ದಿನಗಳ ಬಳಿಕ ವರುಣ ದರ್ಶನ ನೀಡಿದ್ದು ರೈತಾಪಿ ವರ್ಗದಲ್ಲಿ ಹರ್ಷ ಮೂಡಿಸಿದೆ. ಮಳೆ ಮುಂದುವರೆದಲ್ಲಿ ಬಿತ್ತನೆ ಚುರುಕಾಗಲಿದೆ. ಜತೆಗೆ ಬಿತ್ತಿದ ಬೆಳೆ ಉಳಿವ ಆಶಾ ಭಾವ ಮೂಡಿಸಿದೆ.