ಅಪ್ರಾಪ್ತಳ ಅತ್ಯಾಚರಕ್ಕೆ ಸಹಕರಿಸಿದವರಿಗೆ ಶಿಕ್ಷೆ
- ನಾಲ್ವರಿಗೆ 20 ವರ್ಷ ಜೈಲು, 20 ಸಾವಿರ ದಂಡ
ಕೊಪ್ಪಳ : ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಲು ಸಹಕಾರ ನೀಡಿದ ನಾಲ್ವರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಪೋಕ್ಸೋ ನ್ಯಾಯಾಲಯ ಮಾರ್ಚ್ 28ರಂದು ಶಿಕ್ಷೆ ಪ್ರಕಟಿಸಿದೆ.
2020ರ ಅಕ್ಟೋಬರ್ 14ರಂದು ತಾಲೂಕಿನ ಗ್ರಾಮವೊಂದರ ಬಾಲಕಿಯನ್ನು ಪಕ್ಕದ ಮನೆಯಲ್ಲಿ ವಾಸವಿದ್ದ ಪಂಜಾಬ್ನ ಸರವನ್ ಸಿಂಗ್ ಎಂಬಾತ ಅಪಹರಿಸಿದ್ದ. ಪ್ರೀತಿಸುತ್ತಿದ್ದು ಮದುವೆ ಆಗುವೆ. ಬರದಿದ್ದರೆ ಗಲಾಟೆ ಮಾಡುವುದಾಗಿ ಹೆದರಿಸಿದ್ದ. ಬಳಿಕ ಜೋಬನ ಸಿಂಗ್ ನೆರವಿನಿಂದ ಪಂಜಾಬ್ ರಾಜ್ಯದ ಬಹಾನಿ ಬಡೆಸಾನ್ ಗ್ರಾಮಕ್ಕೆ ಕರೆದೊಯ್ದಿದ್ದ. ನಂತರ ಜಸ್ವಂತ ಸಿಂಗ್, ಸರಬ್ಬಿತ್ ಸಿಂಗ್ ಹಾಗೂ ಜಗತಾರ ಸಿಂಗ್ ಸಹಾಯದಿಂದ ಬಾಲಕಿಗೆ 20 ವರ್ಷ ವಯಸ್ಸಾಗಿದೆ ಎಂದು ಕೋರ್ಟ್ ಅಫಿಡವಿಟ್ ಮಾಡಿಸಿದ್ದಾನೆ.
ಬಳಿಕ ಮದುವೆ ಮಾಡಿಕೊಂಡು ಅಮೃತಸರ ಪಟ್ಟಣದ ಸುಖಜ್ಯೋತಿ ಡಾಬಾದಲ್ಲಿ ವಾಸವಾಗಿ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಅಪ್ರಾಪ್ತಳ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಎಎಸ್ಐ ಶರಣಪ್ಪ ಅಂಗಡಿ ಪ್ರಾಥಮಿಕ ತನಿಖೆ ನಡೆಸಿದ್ದು, ಸಿಪಿಐ ರವಿ ಉಕ್ಕುಂದ ಹೆಚ್ಚಿನ ತನಿಖೆ ನಿರ್ವಹಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಹಂತದಲ್ಲೇ ಅತ್ಯಾಚಾರ ಎಸಗಿದ ಸರವನ್ ಸಿಂಗ್ ಮೃತಪಟ್ಟಿದ್ದಾನೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅತ್ಯಾಚಾರಕ್ಕೆ ಸಹಕರಿಸಿದ ಸರವನ್ ಸಿಂಗ್ ಸಹಚರರಾದ ಜೋಬನ್ ಸಿಂಗ್, ಜಸ್ವಂತ್ ಸಿಂಗ್, ಸರಬ್ಬಿತ್ ಸಿಂಗ್ ಹಾಗೂ ಜಗತಾರ್ ಸಿಂಗ್ಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಕುಮಾರ್ ಡಿ.ಕೆ. ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ.