ಸಿದ್ದಾಪುರ ಸಮೀಪದ ಕುಂಟೋಜಿ ಗ್ರಾಮದಲ್ಲಿ ದುಶ್ಚಟಗಳ ನಿಷೇಧ ಕುರಿತು ಗ್ರಾಮಸ್ಥರು ಸಭೆ ನಡೆಸಿದರು. 
ಕೊಪ್ಪಳ

ದುಶ್ಚಟಗಳ ನಿಷೇಧಕ್ಕೆ ಗ್ರಾಮಸ್ಥರ ಸಹಮತ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕುಂಟೋಜಿ ಗ್ರಾಮದ ಸಾರ್ವಜನಿಕ ಸಭೆಯಲ್ಲಿ ಒಮ್ಮತದ ನಿರ್ಧಾರ
ಸಿದ್ದಾಪುರ: ಸಮೀಪದ ಉಳೇನೂರು ಗ್ರಾಮಸ್ಥರ ದುಶ್ಚಟಗಳ ನಿಷೇಧ ನಿರ್ಧಾರ ಈಗ ಮತ್ತೊಂದು ಗ್ರಾಮಕ್ಕೆ ಮಾದರಿಯಾಗಿದೆ.
ಹೌದು ಉಳೇನೂರು ಬಳಿಕ ಸಮೀಪದ ಕಂಟೋಜಿ ಗ್ರಾಮಸ್ಥರು ಸಹ ಬುಧವಾರ ಸಭೆ ಸೇರಿ ಗ್ರಾಮದಲ್ಲಿ ಮದ್ಯ ಮಾರಾಟ, ಇಸ್ಪೀಟ್, ಮಟ್ಕಾ ನಿಷೇಧಿಸುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
ಗ್ರಾಮದಲ್ಲಿ ಹೆಚ್ಚುತ್ತಿರುವ ಮದ್ಯಪಾನ, ಮಟ್ಕಾ ಹಾಗೂ ಜೂಜಾಟದಿಂದ ಗ್ರಾಮದ ಶಾಂತಿ ಕೆಡುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ಎಲ್ಲ ದುಶ್ಚಟಗಳಿಗೆ ಸಂಪೂರ್ಣ ನಿಷೇಧ ವಿಧಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಈ ಕುರಿತ ಸಾರ್ವಜನಿಕ ಸಭೆಯಲ್ಲಿ ಹಿರಿಯರು, ಮಹಿಳೆಯರು, ಯುವಕರು ಭಾಗವಹಿಸಿದ್ದರು.
ಮದ್ಯಪಾನ, ಮಟ್ಕಾ ಹಾಗೂ ಜೂಜಾಟದಿಂದ ಅನೇಕ ಕುಟುಂಬಗಳಲ್ಲಿ ಕಲಹ, ಆರ್ಥಿಕ ಸಂಕಷ್ಟ, ಸಾಲಬಾಧೆಯಿಂದ ತೊಂದರೆಯಾಗಿತ್ತು. ಇದೆಲ್ಲದಕ್ಕೂ ಮುಖ್ಯವಾಗಿ ಯುವ ಪೀಳಿಗೆಯ ಭವಿಷ್ಯಕ್ಕೆ ಕೊಡಲಿ ಪಡೆಟ್ಟು ಬೀಳುತ್ತಿರುವ ಬಗ್ಗೆ ಗಂಭೀರವಾಗಿ ಚರ್ಚಿಸಿದರು.
ಸಭೆಯಲ್ಲಿದ್ದ ಅನೇಕರು ಗ್ರಾಮ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಮಟ್ಕಾ ಹಾಗೂ ಜೂಜಾಟ ನಡೆಸುವುದನ್ನು ಸಂಪೂರ್ಣ ನಿಷೇಧಿಸುವ ಬಗ್ಗೆ ಒಮ್ಮತದ ತೀರ್ಮಾನ ಮಾಡಿದರು. ಈ ನಿಯಮ ಉಲ್ಲಂಘಿಸಿ ಯಾವುದೇ ದುಶ್ಚಟ ನಡೆಸಿದರೆ ಹಾಗೂ ಬೆಂಬಲಿಸಿದರೆ ಗ್ರಾಮ ಮಟ್ಟದಲ್ಲಿ ಕಠಿಣ ಕ್ರಮಕೈಗೊಳ್ಳುವ ಜತೆಗೆ 25 ಸಾವಿರ ರೂ. ದಂಡ ಹಾಕಲಾಗುವುದು. ಇದರ ಜತೆಗೆ ಪೊಲೀಸ್ ಠಾಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.