ಯಲಬುರ್ಗಾ ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜನ ಜಾಗೃತಿ ಬೃಹತ್ ಸಮಾವೇಶವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಎಂಎಲ್ಸಿ ಹೇಮಲತಾ ನಾಯಕ, ಹೋರಾಟಗಾರ್ತಿ ರೂಪಾ ಶ್ರೀನಿವಾಸ ನಾಯಕ, ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ್ ಇತರರಿದ್ದರು. 
ಕೊಪ್ಪಳ

ನಾಯಕರಾಗಿ ಬೆಳೆಯಲು ಸ್ವಯಂ ಪ್ರಯತ್ನ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ
  • ವಾಲ್ಮೀಕಿ ಸಮಾಜದ ಜನ ಜಾಗೃತಿ ಸಮಾವೇಶ
ಯಲಬುರ್ಗಾ:  ವಾಲ್ಮೀಕಿ ಸಮುದಾಯದವರು ಶಿಕ್ಷಣವಂತರಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಯಲಬುರ್ಗಾ- ಕುಕನೂರು ತಾಲೂಕು ಘಟಕ ಹಾಗೂ ನೌಕರರ ಸಂಘದ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ನಾಯಕ ಸಮಾಜದ ಜನ ಜಾಗೃತಿ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ 30 ಕೋಟಿ ರೂ. ವೆಚ್ಚದಲ್ಲಿ ದೆಹಲಿಯಲ್ಲಿ 3 ಎಕರೆಯಲ್ಲಿ ಯುಪಿಎಸ್ಸಿ ಅಭ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ನಾಯಕರಾಗಿ ಬೆಳೆಯಲು ಸ್ವಯಂ ಪ್ರಯತ್ನಿಸಬೇಕು. ಶಿಕ್ಷಣ, ಆರ್ಥಿಕ ಪರಿಸ್ಥಿತಿಯಿಂದ ಹೊರ ಬರಲು ಛಲ, ಚಿಂತನೆ ಇರಬೇಕು. ಸರ್ಕಾರ ಉತ್ತೇಜಿಸಲು ಸೌಲಭ್ಯ ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗೆ ತುಲಾಭಾರ ಸೇವೆ ನಡೆಯಿತು. ಗ್ರಾಮದ ರಾಜ ಬೀದಿಯಲ್ಲಿ ಮಹಿಳೆಯರ ಕುಂಭ, ಕಳಸ ಹಾಗೂ ಸಕಲ ವಾದ್ಯಮೇಳದೊಂದಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಹುಲಿಹೈದರ ವಾಲ್ಮೀಕಿ ಗುರುಗಳಾದ ಶ್ರೀ ರಾಜಾ ನವೀನಚಂದ್ರ ನಾಯಕ ಸಾನ್ನಿಧ್ಯ ವಹಿಸಿದ್ದರು.
ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಹೋರಾಟಗಾರ್ತಿ ದೇವದುರ್ಗದ ರೂಪಾ ಶ್ರೀನಿವಾಸ ನಾಯಕ, ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ್, ಮಾಜಿ ಜಿಲ್ಲಾಧ್ಯಕ್ಷ ಟಿ.ರತ್ನಾಕರ, ಪ್ರಮುಖರಾದ ರಾಜು ನಾಯಕ, ಮಾನಪ್ಪ ಪೂಜಾರ, ಟಿ.ರತ್ನಾಕರ, ಮಾಲತಿ ನಾಯಕ, ರಾಮಣ್ಣ ಕಲ್ಲಣ್ಣವರ, ವೀರನಗೌಡ ಬಳೂಟಗಿ, ಶಿವಣ್ಣ ರಾಯರಡ್ಡಿ, ಹನುಮೇಶ ನಾಯಕ, ಫಕೀರಪ್ಪ ತಳವಾರ್, ಶಂಕ್ರಗೌಡ ಸಾಲಭಾವಿ, ರಾಮಣ್ಣ ಸಾಲಭಾವಿ, ಕೆರಿಬಸಪ್ಪ ನಿಡಗುಂದಿ, ಬಾಲದಂಡಪ್ಪ ತಳವಾರ್ ಇತರರಿದ್ದರು.

ಕುಲಶಾಸ್ತ್ರೀಯ ಅಧ್ಯಯನ ಅವಶ್ಯ

ಪ್ರತಿಯೊಬ್ಬರೂ ವಾಲ್ಮೀಕಿ ರಚಿತ ರಾಮಾಯಣ ಹಾಗೂ ವಾಲ್ಮೀಕಿ ಚರಿತ್ರೆ ತಿಳಿಯಬೇಕು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ರಾಮಾಯಣ ಪುಸ್ತಕ ಲಭ್ಯವಾಗುವಂತೆ ಸಿಎಂ ಸಿದ್ದರಾಮಯ್ಯ ಕ್ರಮ ವಹಿಸಬೇಕು. ರಾಯರಡ್ಡಿ ಅವರು ಮಂತ್ರಿಯಾಗಲು ಹೊರಟಿದ್ದಾರೆ. ವಿಚಾರವಂತರು, ವಿಚಕ್ಷಣವುಳ್ಳವರು ಮಂತ್ರಿಮಂಡಲದಲ್ಲಿದ್ದರೆ ರಾಜ್ಯ ಉದ್ಧಾರವಾಗುತ್ತದೆ. ವಾಲ್ಮೀಕಿ ಸಮುದಾಯದವರು ಪ್ರಾಮಾಣಿಕ ಹಾಗೂ ವಿಚಾರವಂತರಾಗಬೇಕು. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಕೋಟಿಗಟ್ಟಲೆ ಹಣ ಲೂಟಿಯಾಗಿದೆ. ಅಧಿಕಾರ ಅನುಭವಿಸುವ ಮಹಾನುಭಾವರು ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೆ ಜನ ಚಾಟಿ ಬೀಸುತ್ತಾರೆ. ಯಾವುದೇ ಸಮಾಜವನ್ನು ಎಸ್ಸಿ, ಎಸ್ಟಿಗೆ ಸೇರಿಸಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ಸಮಾಜದವರು ವಿದ್ಯೆ, ಸ್ವಾಭಿಮಾನ, ಸ್ವಯಂ ಉದ್ಯೋಗ ಮೈಗೂಡಿಸಿಕೊಂಡರೆ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಸಚಿವ ಸತೀಶ ಜಾರಕಿಹೊಳಿ 50 ವರ್ಷ ಜನಸೇವೆ ಮಾಡಿದ್ದಾರೆ. ಅವರನ್ನು ದೂರ ಸರಿಸದೆ ಸರ್ಕಾರ ಪರಿಗಣಿಸಬೇಕು. ಶೋಷಿತ ವರ್ಗದವರು ಇದೂವರೆಗೂ ಸಿಎಂ ಆಗಿಲ್ಲ. ಆ ಸ್ಥಾನವನ್ನು ಸತೀಶ ತುಂಬುತ್ತಾರೆ ಎನ್ನುವ ಆಶಾಭಾವ ಇದೆ. ಸಮಾಜ ಉದ್ಧಾರವಾಗಲು ಸತೀಶ ಸಿಎಂ ಆಗಬೇಕು.