ಕನಕಗಿರಿಯಲ್ಲಿ ಸೋಮವಾರ ಸಿಐಟಿಯು ತಾಲೂಕು ಮಟ್ಟದ ಸಮಾವೇಶದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮಂಟನಗೌಡ ನಾಡಗೌಡ ಮಾತನಾಡಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಲಕ್ಷ್ಮೀ ಸೋನಾರೆ, ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಅಮರಮ್ಮ ಇತರರಿದ್ದರು.
- ಸಿಐಟಿಯು ರಾಜ್ಯ ಉಪಾಧ್ಯಕ್ಷ ಮಂಟನಗೌಡ ನಾಡಗೌಡ ಒತ್ತಾಯ
- ಕನಕಗಿರಿಯಲ್ಲಿ ತಾಲೂಕು ಸಮಾವೇಶ
ಅಸಂಘಟಿತ ವಲಯದ ಎಲ್ಲ ಕಾರ್ಮಿಕರನ್ನು ಸಿಐಟಿಯು ಸಂಘಟನೆಯೊಳಗೆ ಸೇರಿಸಿಕೊಳ್ಳಲು ಒಗ್ಗಟ್ಟಿನ ಪ್ರಯತ್ನ ಮಾಡಬೇಕಾಗಿದೆ ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷ ಮಂಟನಗೌಡ ನಾಡಗೌಡ ಹೇಳಿದರು.
ಇಲ್ಲಿನ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಿಐಟಿಯು ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ನಿರಂತರ ಅನ್ಯಾಯ ಮಾಡುತ್ತಿವೆ. ಅದಕ್ಕಾಗಿ ಸಿಐಟಿಯು ಕಾರ್ಮಿಕರ ಪಾಲಿನ ತಾಯಿ ಬೇರಿನಂತಿದ್ದು, ಅಂಗನವಾಡಿ, ಬಿಸಿಯೂಟ, ಗ್ರಾಪಂ ಸೇರಿ ವಿವಿಧ ವಲಯಗಳ ಕಾರ್ಮಿಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾರ್ಮಿಕರಿಗೆ 36 ಸಾವಿರ ರೂ. ಕನಿಷ್ಠ ವೇತನ ನೀಡುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸರ್ಕಾರಗಳ ಜವಾಬ್ದಾರಿ. ರಾಜ್ಯದಲ್ಲಿ ಒಂದು ಕೋಟಿ ಜನರು ಸರ್ಕಾರೇತರ ಸಂಸ್ಥೆ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದು, ಜೀವನ ಭದ್ರತೆ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಲಕ್ಷ್ಮೀ ಸೋನಾರೆ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಅಮರಮ್ಮ, ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಸಮಿತಿ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಡಗ್ಗಿ, ಗ್ರಾಪಂ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಶ್ ನಾಯಕ್, ಪರಶುರಾಮ, ಮೌಲಾಹುಸೇನ್, ವೆಂಕಟೇಶ ಭಾವಿಕಟ್ಟಿ, ನಿಂಗಪ್ಪ, ಶಿವು ಇತರರಿದ್ದರು.
ಸಮಾವೇಶದ ನಿರ್ಣಯಗಳು: ಸಮಾವೇಶದಲ್ಲಿ ಕಾರ್ಮಿಕರಿಗೆ ಪಿಂಚಣಿ ಹಾಗೂ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಬೇಕು. ಕನಿಷ್ಠ 31 ಸಾವಿರ ರೂ. ವೇತನ ಜಾರಿ, ಅಂಗನವಾಡಿ ಹಾಗೂ ಬಿಸಿಯೂಟ ಸೇರಿ ಇತರ ಯೋಜನೆಗಳ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಹಮಾಲಿ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಂಚಣಿ, ಮನೆ ನಿವೇಶನ ಹಾಗೂ ಸೇವಾ ಭದ್ರತೆ ಒದಗಿಸಬೇಕು. ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಲು ಸರ್ಕಾರ ಮುಂದಾಗಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.