ಕೊಪ್ಪಳದಲ್ಲಿ ಗುರುವಾರ ಆಯೋಜಿಸಿದ ಆರ್​ಸೆಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಡಿಸಿ ಡಾ. ಸುರೇಶ ಬಿ.ಇಟ್ನಾಳ ಮಾತನಾಡಿದರು. ಜಿಲ್ಲಾ ಪಂಚಾಯತ್​ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಲೀಡ್​ ಬ್ಯಾಂಕ್​ನ ವ್ಯವಸ್ಥಾಪಕ ಮಾರುತಿ ಕೆ., ವಿರೇಶ್​, ಸಿದ್ದಯ್ಯ ಇದ್ದರು. 
ಕೊಪ್ಪಳ

ಸ್ಥಳಿಯ ಕಲೆಗಳ ಬಗ್ಗೆ ಹೆಚ್ಚು ತರಬೇತಿ ನೀಡಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಸುರೇಶ್​ ಬಿ.ಇಟ್ನಾಳ ಸೂಚನೆ
  • ಆರ್​ಸೆಟಿ ಪ್ರಗತಿ ಪರಿಶೀಲನಾ ಸಭೆ
ಕೊಪ್ಪಳ : ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕಿನ್ನಾಳ ಕಲೆಯಂತಹ ವಿಶಿಷ್ಟ ವಿಷಯಗಳ ಕುರಿತು ಹೆಚ್ಚು ತರಬೇತಿಗಳನ್ನು ನೀಡಬೇಕು. ಸ್ಥಳಿಯ ಕಲೆಗಳಿಂದ ಉದ್ಯಮ ಕಟ್ಟಿಕೊಳ್ಳುವ ಕುರಿತು ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ್​ ಬಿ. ಇಟ್ನಾಳ ಸೂಚನೆ ನೀಡಿದರು.
ನಗರದ ಡಿಸಿ ಕಚೇರಿಯಲ್ಲಿ ಗುರುವಾರ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಹೈನುಗಾರಿಕೆ, ಕೋಳಿ ಹಾಗೂ ಕುರಿ ಸಾಗಾಣಿಕೆ, ಜೇನು ಕೃಷಿ, ಅಣಬೆ ಕೃಷಿ, ಟೈಲರಿಂಗ್​, ಉಪ್ಪಿನಕಾಯಿ ತಯಾರಿಕೆ, ಮೊಬೈಲ್​ ರಿಪೇರಿ ಸೇರಿದಂತೆ ಸಾರ್ವಜನಿಕರ ಆಸಕ್ತಿಗೆ ಅನುಗುಣವಾಗಿ ತರಬೇತಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಿ. ಸಂಸ್ಥೆಯಲ್ಲಿ ತರಬೇತಿ ಪಡೆದ ಯುವಜನರಿಗೆ ಉದ್ಯೋಗ ಸೌಲಭ್ಯಗಳು ಸಿಗುವಂತಹ ವಾತಾವರಣ ನಿರ್ಮಿಸಿ. ಆರ್​ಸೆಟಿ ತರಬೇತಿ ಕೇಂದ್ರದಲ್ಲಿ ವರ್ಷದ 365 ದಿನವೂ ತರಬೇತಿ ನೀಡಬೇಕು ಎಂಬ ನಿಯಮವಿದೆ ಅದರಂತೆ ವರ್ಷವಿಡೀ ತರಬೇತಿ ಕಾರ್ಯ ನಿರ್ವಹಿಸಿ ಎಂದರು.
ಜಿಲ್ಲಾ ಪಂಚಾಯತ್​ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಲೀಡ್​ ಬ್ಯಾಂಕ್​ನ ವ್ಯವಸ್ಥಾಪಕ ಮಾರುತಿ ಕೆ., ವಿರೇಶ್​, ಸಿದ್ದಯ್ಯ, ಹರೀಶ್​ ಸಾಲಿ, ಇತರರಿದ್ದರು.