ಕನಕಗಿರಿಯಲ್ಲಿ ಎಸ್‌ಎಫ್‌ಐ ತಾಲೂಕು ಘಟಕದಿಂದ ಶಿರಸ್ತೇದಾರ್ ಶರಣಪ್ಪಗೆ ಮನವಿ ಸಲ್ಲಿಸಲಾಯಿತು. ತಾಲೂಕಾಧ್ಯಕ್ಷ ಹನುಮೇಶ್ ಮ್ಯಾಗಡೆ, ನಿಕಟಪೂರ್ವ ರಾಜ್ಯಾಧ್ಯಕ್ಷ ಅಮರೇಶ ಕಡಗದ, ವಿದ್ಯಾರ್ಥಿಗಳಾದ ಪಲ್ಲವಿ, ಜ್ಯೋತಿ, ದುರ್ಗಮ್ಮ, ಸಂಜನಾ, ಪ್ರಕಾಶ, ದೊಡ್ಡಪ್ಪ ಸುಳೇಕಲ್ ಇತರರಿದ್ದರು. 
ಕೊಪ್ಪಳ

ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ ಶಿರಸ್ತೇದಾರಗೆ ಮನವಿ
  • ಕನಕಗಿರಿ ಎಸ್‌ಎಫ್‌ಐ ತಾಲೂಕು ಘಟಕ ಒತ್ತಾಯ
ಕನಕಗಿರಿ: ತಾಲೂಕು ವ್ಯಾಪ್ತಿಯ ಎಲ್ಲ ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ ಹಾಗೂ ಎಲ್ಲ ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕದಿಂದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಶರಣಪ್ಪಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಮಾತನಾಡಿ, ತಾಲೂಕಿನ ಹಲವು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕುಡಿವ ನೀರು, ಶೌಚಗೃಹ, ಸುಸಜ್ಜಿತ ಕಟ್ಟಡ ಹಾಗೂ ಶಿಕ್ಷಕರ ಕೊರತೆಯಿದೆ. ಕೆಲ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದ ಪರಿಸ್ಥಿತಿಯಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.
ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಡೊನೆಷನ್ ಹಾವಳಿಯಿಂದ ಗ್ರಾಮೀಣ ಬಡ, ಕೂಲಿ ಕಾರ್ಮಿಕ ಹಾಗೂ ದಲಿತ ಕುಟುಂಬಗಳ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಹಾಸ್ಟೆಲ್‌ಗಳಲ್ಲಿ ಅನೇಕ ಸಮಸ್ಯೆಗಳಿವೆ. ಸಿರಿವಾರ, ಬೈಲಕುಂಪುರ, ಅಡವಿಬಾವಿ ತಾಂಡಾ, ದೇವಲಾಪುರ, ಬಂಕಾಪುರ, ಕರಡಿಗುಡ್ಡ ಸೇರಿ ವಿವಿಧೆಡೆ ಶಾಲಾ-ಕಾಲೇಜು ಸಮಯಕ್ಕೆ ಬಸ್ ಸೌಲಭ್ಯವಿಲ್ಲ. ಆದ್ದರಿಂದ ತಾಲೂಕಿನ ಶೈಕ್ಷಣಿಕ ಪರಿಸ್ಥಿತಿ ಪರಿಶೀಲಿಸಿ, ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.