ಕನಕಗಿರಿ ತಾಪಂ ಕಚೇರಿ ಮುಂದೆ ಕೃಷಿ ಕೂಲಿಕಾರ್ಮಿಕರ ಸಂಘದಿಂದ ತಾಪಂ ಇಒ ರಾಜಶೇಖರಗೆ ಮನವಿ ಸಲ್ಲಿಸಲಾಯಿತು. ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ, ಪ್ರಮುಖರಾದ ಚಂದ್ರಪ್ಪ, ನಾಗಮ್ಮ, ಈರಮ್ಮ ಮೆಟ್ರಿ ಇತರರಿದ್ದರು. 
ಕೊಪ್ಪಳ

ಕೂಲಿಕಾರರಿಗೆ ಖಾತ್ರಿ ಕೆಲಸ ನೀಡಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಆಗ್ರಹ
  • ಕನಕಗಿರಿ ತಾಪಂ ಕಚೇರಿ ಮುಂದೆ ಪ್ರತಿಭಟನೆ
ಕನಕಗಿರಿ: ವಿಬಿ ಜಿ ರಾಮ್ ಜಿ ರದ್ದುಪಡಿಸಿ ನರೇಗಾ ಯೋಜನೆ ಮರುಸ್ಥಾಪಿಸುವ ಮೂಲಕ ಕೂಲಿಕಾರರಿಗೆ ಕೆಲಸ ನೀಡುವುದು ಸೇರಿ ಇತರೆ ಬೇಡಿಕೆ ಈಡೇರಿಸಲು ಆಗ್ರಹಿಸಿ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಾಪಂ ಇಒ ರಾಜಶೇಖರಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಹಿರಿಯ ಉಪಾಧ್ಯಕ್ಷ ಎಚ್.ಗಂಗಾಧರಯ್ಯ ಮಾತನಾಡಿ, ನರೇಗಾ ಯೋಜನೆಯಡಿ ಕೂಲಿಕಾರರಿಗೆ ಉದ್ಯೋಗ ನೀಡಲು ವಿಳಂಬ ಮಾಡುತ್ತಿರುವುದು ಖಂಡನೀಯ. ಮಳೆ ಕೈಕೊಟ್ಟ ಕಾರಣ ಗ್ರಾಮೀಣ ಜನ ಕೆಲಸ ಅರಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕರಿಗೆ ನಿರಂತರ ಅನ್ಯಾಯ ಎಸಗುತ್ತಿದ್ದು, ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೆಲಸ ಒದಗಿಸಬೇಕಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳಿಗೆ ಬಾಕಿ ಹಣ ಬಿಡುಗಡೆಯಾಗದೇ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ತಾಲೂಕು ಅಧ್ಯಕ್ಷ ರಮೇಶ ಮಾತನಾಡಿ, ತಾಲೂಕಿನ ಹಿರೇಡಂಕನಕಲ್‌ನ ಮನೆ, ನಿವೇಶನರಹಿತರಿಗೆ ಸರ್ಕಾರ ಜಾಗ ಮಂಜೂರು ಮಾಡಬೇಕು. ಅರ್ಜಿ ಸಲ್ಲಿಸಿದ ಎಲ್ಲ ಬಡವರಿಗೂ ಮನೆ ಹಂಚಿಕೆ ಮಾಡಬೇಕು. ದನದ ಶೆಡ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕು. ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮೇಟಿಗಳಿಗೆ ಬಾಕಿ ಪ್ರೋತ್ಸಾಹಧನ ತಕ್ಷಣ ಮಂಜೂರು ಮಾಡಬೇಕು. ಎನ್‌ಎಂಎಂಎಸ್ ಆ್ಯಪ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಜಂಟಿ ಕಾರ್ಯದರ್ಶಿ ಕೆ.ಹುಸೇನಪ್ಪ, ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ, ಪ್ರಮುಖರಾದ ಚಂದ್ರಪ್ಪ, ನಾಗಮ್ಮ, ಈರಮ್ಮ ಮೆಟ್ರಿ, ದುರ್ಗಮ್ಮ, ಈಶಪ್ಪ ಇತರರಿದ್ದರು.