ಕೊಪ್ಪಳ ಜಿಪಂ ಸಮಿತಿ ಸಭಾಂಗಣದಲ್ಲಿ ಎಸ್ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ವಣಿತ್ ನೇಗಿ ಮಾತನಾಡಿದರು. ಮಾರುತಿ ಕೆ., ರಾಯೇಶ್ವರ ಪೈ, ತಾರಕೇಶ್ವರ, ವಿರೇಶ್ ಇದ್ದರು.
- ಸಿಇಒ ವರ್ಣಿತ್ ನೇಗಿ ಸೂಚನೆ
- ಎಸ್ಬಿಐ ಆರ್ಸೆಟ್ಇ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ
ಕೊಪ್ಪಳ : ಎಸ್ಬಿಐ ಆರ್ಸೆಟ್ಇ ಸಂಸ್ಥೆಯಲ್ಲಿ ತರಬೇತಿ ಪೂರ್ಣಗೊಳಿಸಿದ ಅರ್ಹ ಫಲಾನುಭವಿಗಳಿಗೆ ಸ್ವ&-ಉದ್ಯೋಗ ಪ್ರಾರಂಭಿಸಲು ಅಗತ್ಯ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಜಿಪಂ ಸಿಇಒ ವರ್ಣಿತ್ ನೇಗಿ ಸೂಚನೆ ನೀಡಿದರು.
ಜಿಪಂ ಸಮಿತಿ ಸಭಾಂಗಣದಲ್ಲಿ ಬುಧವಾರ ಎಸ್ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ವಿವಿಧ ಇಲಾಖೆಗಳ ಬೇರೆ-, ಬೇರೆ ಯೋಜನೆಗಳಡಿ ಹೊಸ ತರಬೇತಿ ಕಾರ್ಯಾಗಾರಗಳನ್ನು ಆರ್ಸೆಟ್ಇ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲು ಕ್ರಮ ವಹಿಸಿ. ಸಾರ್ವಜನಿಕರ ಆಸಕ್ತಿಗೆ ಅನುಗುಣವಾಗಿ ತರಬೇತಿ ವಿಷಯ ಆಯ್ಕೆ ಮಾಡಿಕೊಂಡು ತರಬೇತಿ ನೀಡಿ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಿದ ನಿರುದ್ಯೋಗಿ ಅಭ್ಯರ್ಥಿಗಳ ಪಟ್ಟಿ ಪಡೆದು, ಅಭ್ಯರ್ಥಿಗಳನ್ನು ಸಂಪರ್ಕಿಸಿ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ತರಬೇತಿ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಸಂಸ್ಥೆ ಹಾಗೂ ಲೀಡ್ ಬ್ಯಾಂಕ್ ನಿಂದ ಅಗತ್ಯ ಅನುಕೂಲ ಮಾಡಿಕೊಡಬೇಕು. ಇದರ ಜೊತೆ ವಿವಿಧ ಇಲಾಖೆಗಳ ಮೂಲಕ ದೊರೆಯುವ ಸಹಾಯಧನ, ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ತರಬೇತಿ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದರ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ. ಅಭ್ಯರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ಹೇಳಿದರು.
ಲೀಡ್ ಬ್ಯಾಂಕ್ನ ವ್ಯವಸ್ಥಾಪಕ ಮಾರುತಿ ಕೆ., ಆರ್ಸೆಟಿ ನಿರ್ದೇಶಕ ರಾಯೇಶ್ವರ ಪೈ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ತಾರಕೇಶ್ವರ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗಾಧಿಕಾರಿ ವಿರೇಶ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಹಾದೇವ ಕೀರ್ತಿ ಇತರರಿದ್ದರು.