ಕುಷ್ಟಗಿಯ ಸರ್ಕಿಟ್ ಹೌಸ್‌ನಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಶಾಸಕ ದೊಡ್ಡನಗೌಡ ಪಾಟೀಲ್, ತಾಪಂ ಇಒ ಪಂಪಾಪತಿ ಹಿರೇಮಠ, ತಹಸೀಲ್ದಾರ್ ಅಶೋಕ ಶಿಗ್ಗಾವಿ ಇದ್ದರು.
ಹಳ್ಳಿಗರಿಗೆ ಕುಡಿವ ನೀರಿನ ಸೌಲಭ್ಯ ಒದಗಿಸಿ
ಕುಷ್ಟಗಿ: ತಾಲೂಕು ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ಕುಡಿವ ನೀರಿನ ಸಮಸ್ಯೆಗೆ ಸ್ಥಳೀಯ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ ಸೂಚಿಸಿದರು.
ಪಟ್ಟಣದ ಕೊಪ್ಪಳ ರಸ್ತೆಯ ಸರ್ಕಿಟ್ ಹೌಸ್‌ನಲ್ಲಿ ಶಾಸಕರ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿವ ನೀರಿನ ತೊಂದರೆ ಉಲ್ಬಣಿಸಿದ್ದು, ಶೀಘ್ರವೇ ಹರಿಹರಿಸಬೇಕು. ಸಾರ್ವಜನಿಕರಿಂದ ದೂರು ಬರದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು.
ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನ ಹಾಗೂ ಜಾನುವಾರಗಳಿಗೆ ನೀರಿನ ಸಮಸ್ಯೆ ಉಂಟಾಗಿದ್ದು, ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಹರಿಸಬೇಕು ಎಂದು ತಿಳಿಸಿದರು.
ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬೋರ್‌ವೆಲ್ ಕೆಟ್ಟಿದ್ದು, ಅವುಗಳನ್ನು ಸರಿಪರಿಸಲು ಕ್ರಮ ವಹಿಸಲಾಗಿದೆ. ಕೆಲವೆಡೆ ಜೆಜೆಎಂ ಕಾಮಗಾರಿಯಿಂದ ಹಳ್ಳಿಗಳಲ್ಲಿ ನೀರಿನ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರಿಗೆ ತ್ವರಿತವಾಗಿ ನೀರು ಒದಗಿಸಲು ಸೂಚಿಸಲಾಗಿದೆ ಎಂದರು.
ಜಿಪಂ ಇಂಜಿನಿಯರ್ ದೀಪಾ ಮಾತನಾಡಿ, ಹುನಗುಂದದಿಂದ ಕುಷ್ಟಗಿಗೆ ಬರುವ ಕುಡಿವ ನೀರಿನ ಪೈಪ್‌ಲೈನ್ ಕೆಟ್ಟಿದ್ದು, ಕೂಡಲೇ ಸರಿಪಡಿಸಬೇಕು. ನಿರಂತರ ನೀರು ಪೂರೈಸಲಾಗುತ್ತಿದ್ದು, ಅನುದಾನ ಅಭಾವದಿಂದ ಹೊಸ ಕಾಮಗಾರಿ ನಡೆಸಿಲ್ಲ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ್ ಪ್ರತಿಕ್ರಿಯಿಸಿ, ಪುರಸಭೆಯಿಂದ ಅನುದಾನ ಬಳಿಸಿ ಕಾಮಗಾರಿ ಪೂರ್ಣಗೊಳಿಸಿ ಎಂದರು.
ತಹಸೀಲ್ದಾರ್ ಅಶೋಕ್ ಶಿಗ್ಗಾವಿ, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತುಗ್ಗಲೆಪ್ಪ ದೇಸಾಯಿ, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ವೀರಪ್ಪ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒ ಇದ್ದರು.