- ಆಯೋಗ ಅಧ್ಯಕ್ಷ ಪಿ.ರಘು ಸೂಚನೆ
ಕೊಪ್ಪಳ: ಊರು, ನಗರಗಳನ್ನು ಸ್ವಚ್ಛತೆ ಮಾಡಿ, ಆರೋಗ್ಯ ವಾತಾವರ ನಿರ್ಮಿಸುವ ಪೌರಕಾರ್ಮಿಕರಿಗೆ, ಕೆಲಸದ ಸ್ಥಳಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಿ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಸೂಚಿಸಿದರು.
ಜಿಲ್ಲಾ ಪಂಚಾಯತ್ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಫಾಯಿ ಕರ್ಮಚಾರಿ/ಪೌರಕಾರ್ಮಿಕರ ಕುಂದು ಕೊರತೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪೌರಕಾರ್ಮಿಕರಿಗೆ ಕಡ್ಡಾಯವಾಗಿ ವಿಶ್ರಾಂತಿ ಗೃಹ ಸ್ಥಾಪಿಸಬೇಕು. ನಗರ ಹೊರಾಂಗಣ ಸ್ಥಳದ ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ಯಾವುದೇ ಹೋಟೆಲ್ಗಳ ಅಡೆತಡೆ ಇಲ್ಲದೆ ಶೌಚಾಲಯ ಬಳಸಲು ಅವಕಾಶ ನೀಡಬೇಕು. ಇದು ದೇಶದ ಪ್ರತಿಯೊಬ್ಬರ ಹಕ್ಕಾಗಿದೆ. ಪ್ರತಿ ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷತಾ ಕೈ&ಗ್ಲೌಸ್, ಬೂಟ್, ಮಾಸ್ಕ್ ಇತರೆ ಸುರಕ್ಷತಾ ಕಿಟ್ಗಳನ್ನು ಒದಗಿಸಬೇಕು. ಸಮಯಕ್ಕೆ ಸರಿಯಾಗಿ ಬೆಳಗಿನ ಉಪಾಹಾರವನ್ನು ಕಲ್ಪಿಸಬೇಕು ಎಂದು ಸಂಬಂಧಿಸಿದ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ತಿಳಿಸಿದರು.
ಕನಿಷ್ಠ ವೇತನ ನಿಯಮದಂತೆ ಖಾಯಂ ಪೌರಕಾರ್ಮಿಕರಿಗೆ ಸಮಯಕ್ಕೆ ವೇತನ ಪಾವತಿ ಮಾಡಬೇಕು. ಗೌರವಧನ ಆಧಾರದಲ್ಲಿ ನೇಮಕಗೊಂಡ ಸ್ವಚ್ಛತಾ ಕಾರ್ಮಿಕರಿಗೆ ನಿಯಮಾನುಸಾರ ವೇತನ ನೀಡಬೇಕು. ಪಿಎಫ್, ಇಎಸ್ಐ ಸೌಲಭ್ಯ ಒದಗಿಸಿ. ಗುರುತಿನ ಚೀಟಿ ನೀಡಬೇಕು. ಪೌರಕಾರ್ಮಿಕರು ಖಾಯಂ ಅಥವಾ ಹೊರಗುತ್ತಿಗೆ ಯಾರೇ ಆದರೂ ಸುರಕ್ಷತಾ ಪರಿಕರಗಳನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯ ಮಾಡುವಂತೆ ಅರಿವು ಮೂಡಿಸಿ. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಏರ್ಪಡಿಸಿ, ಆರೋಗ್ಯ ತಪಾಸಣೆ ಹಾಗೂ ವರ್ಷಕ್ಕೊಮ್ಮೆ ಉನ್ನತ ಮಟ್ಟದ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಸಂಶೋಧನಾ ಅಧಿಕಾರಿ ಮಹದೇವ ಸ್ವಾಮಿ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ರಾಮ್ ಎಲ್.ಅರಸಿದ್ದಿ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಮಂಜುನಾಥ ಡಿ. ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.