ಕುಕನೂರು ತಾಲೂಕು ಅಭಿವೃದ್ಧಿ ಸಮಿತಿ ಹಾಗೂ ವಿವಿಧ ಸಂಘಟನೆಗಳು ಕುಕನೂರು ಬಂದ್ ಮಾಡಿ ಸೋಮವಾರ ಎಸಿ ಮಹೇಶ ಮಾಲಗಿತ್ತಿ ಮನವಿ ಸಲ್ಲಿಸಿದವು. ತಹಸೀಲ್ದಾರ್ ಎಚ್.ಪ್ರಾಣೇಶ, ರೈತ ಈಶಪ್ಪ ಸಬರದ, ವಕೀಲ ಬಸವರಾಜ ಜಂಗ್ಲಿ ಇದ್ದರು.
- ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಸಮಿತಿ, ಸಂಘಟನೆಗಳಿಂದ ಪ್ರತಿಭಟನೆ
- ಸಂಚಾರ ಸ್ಥಗಿತ, ಪ್ರಯಾಣಿಕರಿಗೆ ಅನನುಕೂಲ
ಕುಕನೂರು: ಸರ್ಕಾರಿ ಭೂಮಿಯಲ್ಲಿ ತಾಲೂಕಾಡಳಿತ, ನ್ಯಾಯಾಲಯ, ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ತಾಲೂಕು ಅಭಿವೃದ್ಧಿ ಸಮಿತಿ ಹಾಗೂ ವಿವಿಧ ಸಂಘಟನೆಗಳು ಸೋಮವಾರ ಕುಕನೂರು ಬಂದ್ ನಡೆಸಿ ಪ್ರತಿಭಟನೆ ಮಾಡಿದವು.
ಪಟ್ಟಣದ ಎಪಿಎಂಸಿಯಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ಕೊಳಿಪೇಟೆ, ಅಂಬೇಡ್ಕರ್ ವೃತ್ತ ಮೂಲಕ ವೀರಭದ್ರಪ್ಪ ವೃತ್ತದವರೆಗೆ ಸಾಗಿತು. ಪ್ರಮುಖರಾದ ನಾರಾಯಣಪ್ಪ ಹರಪನಹಳ್ಳಿ ಮಾತನಾಡಿ, ಸರ್ಕಾರವು ಗುದ್ನೇಪ್ಪನಮಠದ ಭೂಮಿಯಲ್ಲಿ ಸರ್ಕಾರಿ ಕಟ್ಟಡಗಳಿಗಾಗಿ ಭೂಮಿಯನ್ನು ಗುರುತಿಸಲಾಗಿದೆ.
ಈ ಭೂಮಿ ಕುರಿತು ಸ್ಥಳೀಯರು ಕೋರ್ಟ್‌ಗೆ ಹೋಗಿದ್ದಾರೆ. ಗುದ್ನೇಪ್ಪನಮಠದಲ್ಲಿ ಇನ್ನೂ ಹೆಚ್ಚಿನ ಭೂಮಿ ಇದ್ದು, ಅವರು ಎಲ್ಲಿ ಬೇಕಾದರೂ ಭೂಮಿ ಪಡೆಯಬಹುದಾಗಿದೆ. ಗುದ್ನೇಪ್ಪನಮಠದ ಭೂಮಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣದಿಂದ ತಾಲೂಕು ಅಭಿವೃದ್ಧಿಯಾಗುತ್ತದೆ.
ಎಲ್ಲರೂ ದ್ವೇಷ ಭಾವನೆ ಬಿಟ್ಟು, ಕೋರ್ಟ್‌ನ ತೀರ್ಪಿಗೆ ಬದ್ಧರಾಗಿ ಸಹೋದರತ್ವದ ಭಾವನೆಯಲ್ಲಿ ಹೋಗೋಣ. ಇದೀಗ ಜಾತ್ರೆ ಬಂದಿದ್ದು, ಎಲ್ಲರೂ ಕೂಡಿ ಮಾಡೋಣ. ಜವಾಬ್ದಾರಿ ಸ್ಥಾನದಲ್ಲಿರುವ ಎಲ್ಲರೂ ಕೋರ್ಟ್ ಹಾದಿಯಲ್ಲಿ ಹೋಗಿ ತಾಲೂಕಿನ ಅಭಿವೃದ್ಧಿ ಮಾಡಬೇಕಿದೆ ಎಂದರು.
ಕುಕನೂರು ಬಂದ್ ಹಿನ್ನೆಲೆಯಲ್ಲಿ ಬಸ್‌ನಿಲ್ದಾಣ ರಸ್ತೆ ಬಿಕೋ ಎನ್ನುತ್ತಿತ್ತು.
ಮುಖಂಡ ಸಂಗಮೇಶ ಗುತ್ತಿ ಮಾತನಾಡಿ, 2018ರಲ್ಲಿ ಕುಕನೂರು ತಾಲೂಕಾದರೂ ಇಲ್ಲಿಯವರೆಗೂ ಒಂದೂ ಸರ್ಕಾರಿ ಕಟ್ಟಡ ನಿರ್ಮಾಣವಾಗಿಲ್ಲ. ಸರ್ಕಾರ ನಿಗದಿಪಡಿಸಿದ ಭೂಮಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು.
ಅಲ್ಲಿ ಅವಕಾಶ ನೀಡದಿದ್ದರೆ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಎಲ್ಲ ಮನೆ, ಕಟ್ಟಡಗಳನ್ನು ತೆರವುಗೊಳಿಸಿ, ದೇವಸ್ಥಾನ ಮಾತ್ರ ಇರುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ರೈತ ಈಶಪ್ಪ ಸಬರದ, ವಕೀಲ ಬಸವರಾಜ ಜಂಗ್ಲಿ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ ಮಾತನಾಡಿದರು.
ಕೆಎಂಎಫ್ ನಿರ್ದೇಶಕ ಹಂಪಯ್ಯಸ್ವಾಮಿ, ಗ್ಯಾರಂಟಿ ಸಮಿತಿ ತಾಲೂಕು ಸದಸ್ಯ ಭೀಮಣ್ಣ, ವಕೀಲ ಎಂ.ಎಚ್.ಉಜ್ಜಮ್ಮನವರ, ವರ್ತಕರ ಸಂಘದ ಅಧ್ಯಕ್ಷ ರವಿ ನಾಲ್ವಾಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಸೇರಿದಂತೆ ಸಿದ್ದಯ್ಯ ಕಳ್ಳಿಮಠ, ರೆಹೆಮಾನಸಾಬ್ ಮಕ್ಕಪ್ಪನವರ್, ರಾಘವೇಂದ್ರ ಕಾತರಕಿ, ರಾಮಣ್ಣ ಬಂಕದಮನಿ, ಗಗನ ನೋಟಗಾರ ಸೇರಿದಂತೆ ಅನೇಕ ಮುಖಂಡರಿದ್ದರು.
ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದರಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಶಾಲಾ, ಕಾಲೇಜುಗಳಿಗೆ ರಜೆ ಘೊಷಣೆ ಮಾಡಲಾಗಿತ್ತು. ಬಸ್ ಸಂಚಾರ ಸ್ಥಗಿತವಾದ ಕಾರಣ ಪ್ರಯಾಣಿಕರು ಪರದಾಡಿದರು.
ಈ ಹಿಂದೆ ಕುಕನೂರಿನ ಕೊಪ್ಪಳ ರಸ್ತೆಯಲ್ಲಿ ತಾಲೂಕಾಡಳಿತಕ್ಕೆ ಭೂ ಸ್ವಾಧೀನಕ್ಕಾಗಿ ನಿಗದಿಪಡಿಸಿದ ಭೂಮಿಯ ಮಾಲೀಕರು ಆಗಮಿಸಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಟ್ಟು, ಸರ್ಕಾರಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಎಂದು ಎಸಿ ಮಹೇಶ ಮಾಲಗಿತ್ತಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.