ಕೊಪ್ಪಳ : ಬಸ್ ಪ್ರಯಾಣ ದರ ಏರಿಸುವ ಸರಕಾರದ ನಿರ್ಧಾರ ಜನ ವಿರೋಧಿ ನೀತಿಯಾಗಿದೆ ಒಂದು ವೇಳೆ ಬಸ್ ದರ ಹೇಚ್ಚಳವಾದಲ್ಲಿ ಪ್ರತಿಭಟನೆ ಖಂಡಿತ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಸ್ತೆ ಸಾರಿಗೆ ಸಾರ್ವಜನಿಕ ದರ ನಿಯಂತ್ರಣ ಸಮಿತಿ ಅಧ್ಯಕ್ಷ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಮಿತಿ ನೀಡುವ ವರದಿ ಆಧಾರದ ಮೇಲೆ ದರ ಹೆಚ್ಚಳಕ್ಕೆ ತೀಮಾರ್ನಿಸಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಪ್ರತಿ ವರ್ಷ ನಾಲ್ಕೂ ಸಾರಿಗೆ ನಿಗಮಗಳು ಒಟ್ಟಾಗಿ ಸುಮಾರು 10,000 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಬಸ್ ದರ ಏರಿಸದಿದ್ದರೆ ನಿಗಮಗಳನ್ನು ಮುಚ್ಚಬೇಕಾಗುತ್ತದೆ ಎಂದಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಿವಾಳಿಯಾಗಿರುವುದು ಸರಕಾರ ಜಾರಿಗೊಳಿಸಿರುವ ಅವೈಜ್ಞಾನಿಕ ಯೋಜನೆಗಳಿಂದ, ಡೀಸೆಲ್ ದರ ಏರಿಕೆಯಿಂದಲ್ಲ ಎಂಬುದನ್ನು ಸಚಿವರು ತಿಳಿದುಕೊಳ್ಳಬೇಕು. ಬಲಗೈಯಿಂದ ಕೊಟ್ಟು ಎಡಗೈಯಿಂದ ಕಿತ್ತುಕೊಳ್ಳುವ ನೀತಿ ಕಾಂಗ್ರೆಸ್ ಸರಕಾರ ಈ ಕೂಡಲೇ ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಸಂಸ್ಥೆಗೆ ಆಗುತ್ತಿರುವ ನಷ್ಟಕ್ಕೆ ಪ್ರಯಾಣಿಕರನ್ನು ಹೊಣೆಗಾರರನ್ನಾಗಿಸುವುದು ಮೂರ್ಖತನ. ಡೀಸೆಲ್ ದರ ಏರಿದೆ ಎಂಬ ನೆಪ ಇಟ್ಟುಕೊಂಡು ಬಸ್ ದರ ಏರಿಸುವ ಹೊನ್ನಾರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಅವೈಜ್ಞಾನಿಕ ಯೋಜನೆಗಳಿಂದ ಸಾರಿಗೆ ಸಿಬ್ಬಂದಿ ಹಾಗೂ ಅಮಾಯಕ ಪ್ರಯಾಣಿಕರಿಗೆ ಭಾರಿ ಅನ್ಯಾಯವಾಗುತ್ತಿದೆ. ಆರ್ಥಿಕ ದೇವಾಳಿತನದಿಂದ ಸಂಸ್ಥೆ ಮುಚ್ಚಿದರೆ ಅದಕ್ಕೆ ಕಾಂಗ್ರೆಸ್ ಸರಕಾರವೇ ನೇರ ಹೊಣೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯಾಣಿಕರಿಗೆ ಮತ್ತಷ್ಟು ಹೊರೆ ಏರಿದರೆ ಜೆಡಿಎಸ್ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಪ್ರಕಟನೆಯ ಮೂಲಕ ಎಚ್ಚರಿಸಿದ್ದಾರೆ.