ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ವಾಪಸ್​ ಪಡೆಯಲು ಆಗ್ರಹಿಸಿ ಬಿಜೆಪಿ ಮುಖಂಡರು ಬುಧವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಪ್ರಮುಖರಾದ ಡಾ.ಬಸವರಾಜ ಕ್ಯಾವಟರ್​, ---------ಪ್ರದಿಪ ಹಿಟ್ನಾಳ, ಡಿ.ಮಲ್ಲಣ್ಣ, ಉಮೇಶ ಕುರಡೇಕರ್​, ಕನಕಮೂರ್ತಿ, ನೀಲಕಂಠಯ್ಯ, ಗೀತಾ ಮುತ್ತಾಳ, ಕೀರ್ತಿ ಪಾಟೀಲ್​, ಜಯಶ್ರೀ ಗೊಂಡಬಾಳ, ಫಕೀರಪ್ಪ ಆರೇರ್​ ಇದ್ದರು.  
ಕೊಪ್ಪಳ

ದ್ವೇಷ ಭಾಷಣ ವಿಧೇಯಕ ಹಿಂಪಡೆಯಿರಿ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ನಾಯಕರ ಆಗ್ರಹ
  • ಜಿಲ್ಲಾದ್ಯಂತ ಪ್ರತಿಭಟನೆ
ಕೊಪ್ಪಳ: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ ವಾಪಸ್​ ಪಡೆಯುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಬುಧವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಮಾತನಾಡಿ, ಸಂವಿಧಾನದ ರಕ್ಷಕರು ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಕಾಂಗ್ರೆಸ್ಸಿಗರು ಸಂವಿಧಾನದ ಕತ್ತು ಹಿಸುಕಲು ಮುಂದಾಗಿದ್ದಾರೆ. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಮೂಲಕ ವಾಕ್​ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ನಿರಂಕುಶ ಪ್ರಭುತ್ವ ಸ್ಥಾಪಿಸಲು ಮುಂದಾಗಿದ್ದಾರೆ. ಯಾವುದೇ ಮುಂದಾಲೋಚನೆ ಇಲ್ಲದೇ ವಿಧೇಯಕ ಮಂಡಿಸಲಾಗಿದೆ. ವಿಪಕ್ಷದವರು ಕೇಳಿದ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರ ಇಲ್ಲದಂತಾಗಿದೆ. ಇದನ್ನು ಖಂಡಿಸಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಮಸೂದೆ ಬಗ್ಗೆ ಸಮಗ್ರವಾಗಿ ಚರ್ಚಿಸಿಲ್ಲ. ವಿಧಾನಸಭೆ, ಪರಿಷತ್​ನಲ್ಲೂ ಅವಕಾಶ ಕಲ್ಪಿಸಿಲ್ಲ. ಕೇವಲ 6 ಪುಟದಲ್ಲಿ ತರಾತುರಿಯಲ್ಲಿ ಮಂಡಿಸಿದ್ದಾರೆ. ಪ್ರಭುತ್ವ ವಿರೋಧಿ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡಿದ್ದಾರೆ. ಕಾಯ್ದೆಯಾಗಿ ಜಾರಿಯಾದಲ್ಲಿ ವಾಕ್​ ಸ್ವಾತಂತ್ರ$್ಯಕ್ಕೆ ಧಕ್ಕೆಯಾಗಲಿದೆ ಎಂದು ಆರೋಪಿಸಿದರು.
ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್​ ವಿಠ್ಠಲ್​ ಚೌಗಲಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಮುಖರಾದ ಪ್ರದಿಪ ಹಿಟ್ನಾಳ, ಡಿ.ಮಲ್ಲಣ್ಣ, ಉಮೇಶ ಕುರಡೇಕರ್​, ಕನಕಮೂರ್ತಿ, ನೀಲಕಂಠಯ್ಯ, ಗೀತಾ ಮುತ್ತಾಳ, ಕೀರ್ತಿ ಪಾಟೀಲ್​, ಜಯಶ್ರೀ ಗೊಂಡಬಾಳ, ಫಕೀರಪ್ಪ ಆರೇರ್​ ಇತರರಿದ್ದರು.