ಕೊಪ್ಪಳ ಅಶೋಕ ವೃತ್ತದ ಬಳಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿ ಸುಟ್ಟ ದ್ವಿಚಕ್ರ ವಾಹನ ರಸ್ತೆ ಬದಿ ಬಿದ್ದಿರುವುದು. 
ಕೊಪ್ಪಳ

ಕೈ ಕಾರ್ಯಕರ್ತರ ಎಡವಟ್ಟು ಸುಟ್ಟ ವಾಹನ ರಸ್ತೆ ಬದಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಸ್ಥಾನಕ್ಕಾಗಿ ಪ್ರತಿಭಟನೆ
ಕೊಪ್ಪಳ : ಶಾಸಕ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸೋಮವಾರ (ಜು. 8) ಕಾಂಗ್ರೆಸ್​ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಬೆಂಕಿ ಹಚ್ಚಲಾದ ದ್ವಿಚಕ್ರ ವಾಹನ ಇನ್ನೂ ರಸ್ತೆ ಬದಿಯಲ್ಲೇ ಬಿದ್ದಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬನ್ನಿಕಟ್ಟೆಯಿಂದ ಅಶೋಕ ವೃತ್ತದವರೆಗೆ ನಡೆದ ಪಾದಯಾತ್ರೆಯ ವೇಳೆ ಪ್ರತಿಭಟನಾಕಾರರು ಅಶೋಕ ವೃತ್ತದಲ್ಲಿ ಟೈರ್​ಗಳಿಗೆ ಹಾಗೂ ಹಳೆಯ ಸ್ಕೂಟಿಯೊಂದನ್ನು ರಸ್ತೆಯ ಮಧ್ಯಭಾಗಕ್ಕೆ ತಂದು ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲಾಗಿತ್ತು. ಬೆಂಕಿಯ ತೀವ್ರತೆಗೆ ವಾಹನ ಸ್ಫೋಟಗೊಂಡು ಕೆಲಕಾಲ ಆತಂಕದ ವಾತಾವರಣ ನಿಮಾರ್ಣವಾಗಿತ್ತು. ಘಟನೆಯಿಂದ ಸಂಚಾರ ದಟ್ಟಣೆ ಉಂಟಾಗಿ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಪ್ರತಿಭಟನೆ ನಡೆದ ಹಲವು ದಿನಗಳು ಕಳೆದರೂ ಸುಟ್ಟ ವಾಹನವನ್ನು ತೆರವುಗೊಳಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ನಗರಸಭೆ ಅಧಿಕಾರಿಗಳಾಗಲಿ ಅಥವಾ ಪ್ರತಿಭಟನೆ ಆಯೋಜಿಸಿದ್ದ ಕಾಂಗ್ರೆಸ್​ ಮುಖಂಡರು ಹಾಗೂ ಕಾರ್ಯಕರ್ತರಾಗಲಿ ವಾಹನವನ್ನು ತೆರವುಗೊಳಿಸುವತ್ತ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಸ್ತೆಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚುವುದು ಕಾನೂನುಬಾಹಿರವಾಗಿದ್ದು, ಬಳಿಕ ಅದರ ಅವಶೇಷಗಳನ್ನು ತೆರವುಗೊಳಿಸದೇ ಬಿಟ್ಟಿರುವುದು ರ್ನಿಲಕ್ಷ್ಯದ ಪರಮಾವಧಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದಿರುವ ಸುಟ್ಟ ವಾಹನ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಯಿದ್ದು, ತಕ್ಷಣ ತೆರವುಗೊಳಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಸುಟ್ಟ ವಾಹನವನ್ನು ಕೂಡಲೇ ತೆರವುಗೊಳಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.