ಕೊಪ್ಪಳದಲ್ಲಿ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೂರು ಇಲಾಖೆಗಳ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಗ್ಯಾನೇಶ ಕಡಗದ, ಮಹ್ಮದ ರಪೀಕ್, ಪಕೀರಪ್ಪ, ದಾವಲಸಾಬ, ಬಸವರಾಜ, ಬಾಳೇಶ ಅಂಗಡಿ ಇದ್ದರು.
- ಅಧಿಕಾರಿಗಳಿಗೆ ಮನವಿ ಸಲ್ಲಿಕೆ
ಕೊಪ್ಪಳ : ಹೊರಗುತ್ತಿಗೆ ನೌಕರರ ಕನಿಷ್ಠ ವೇತನ ಜಾರಿ, ಸೇವಾಭದ್ರತೆ ಹಾಗೂ ಖಾಯಂ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಧರಣಿ ನಡೆಸಲಾಯಿತು.
ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಹಾಸ್ಟೇಲ್ ಮತ್ತು ವಸತಿ ನಿಲಯಗಳಲ್ಲಿ ಅಡುಗೆಯವರು, ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ನರ್ಸ್ಗಳು ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಕಳೆದ 15ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸಮರ್ಪಕ ವೇತನ ಮತ್ತು ಸೇವಾ ಭದ್ರತೆ ಇಲ್ಲದಿರುವುದನ್ನು ಹಾಸ್ಟೆಲ್ ಹೊರಗುತ್ತಿಗೆ ನೌಕರರು ಖಂಡಿಸಿ ಪ್ರತಿಭಟನೆ ನಡೆಸಿದರು.
ಪ್ರಸ್ತುತ ತಿಂಗಳಿಗೆ 10ರಿಂದ 14 ಸಾವಿರ ರೂ. ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದ್ದು, ಕೆಲಸದ ಅವಧಿಯೂ ನಿಗದಿಯಾಗಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು. 2025ರ ಏಪ್ರಿಲ್ 11ರಂದು ಕಾರ್ಮಿಕ ಇಲಾಖೆ ಹೊರಡಿಸಿದ ಕನಿಷ್ಠ ವೇತನದ ಕರಡು ಅಧಿಸೂಚನೆ ಇನ್ನೂ ಜಾರಿಯಾಗದಿರುವುದನ್ನು ವಿರೋಧಿಸಿದರು.
ಹೊಸ ಹಾಸ್ಟೇಲ್ಗಳಲ್ಲಿ ಅಧಿಕಾರಿಗಳು ತಮ್ಮ ಸಂಬಂಧಿಕರಿಗೆ ಉದ್ಯೋಗ ನೀಡುವುದು, ಹಳೆಯ ನೌಕರರನ್ನು ಕೆಲಸದಿಂದ ತೆಗೆದುಹಾಕುವುದು ಹಾಗೂ ಏಪ್ರಿಲ್-ಮೇ ತಿಂಗಳಲ್ಲಿ ಸಿಬ್ಬಂದಿಯನ್ನು ಕೆಲಸದಿಂದ ಬಿಡಿಸುವ ಕ್ರಮಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಕನಿಷ್ಠ ವೇತನ ಜಾರಿ, ಪಿಎಫ್&-ಇಎಸ್ಐ ಸೌಲಭ್ಯ, ಆರೋಗ್ಯ ಕಾರ್ಡ್ ಹಾಗೂ ಸೇವಾಭದ್ರತೆ ನೀಡುವಂತೆ ಆಗ್ರಹಿಸಿ ಜಿಪಂ ಡಿಎಸ್ ಟಿ. ಕೃಷ್ಣಮೂರ್ತಿ, ಹಿಂದುಳಿದ ವರ್ಗಗಳ ಇಲಾಖೆ ಡಿಡಿ ನಾಗಮಣಿ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಡಿಡಿ ಅಜ್ಜಪ್ಪ ಸೋಗಲದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಡಿಡಿ ಅಜ್ಮೀರ ಅಲಿ ಅವರಿಗೆ ಮನವಿ ಸಲ್ಲಿಸಲಾಯಿತು.
ಗ್ಯಾನೇಶ ಕಡಗದ, ಮಹ್ಮದ ರಪೀಕ್, ಪಕೀರಪ್ಪ, ದಾವಲಸಾಬ, ಬಸವರಾಜ, ಬಾಳೇಶ, ಹನುಮಂತ, ಗಂಗೇಶ, ಶೇಖರಪ್ಪ, ಹನುಮೇಶ ಮುಕ್ಕುಂಪಿ, ದಸಾಂತಮ್ಮ, ಪಾರ್ವತಿ ಇತರರಿದ್ದರು.
ಕೊಪ್ಪಳದಲ್ಲಿ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೂರು ಇಲಾಖೆಗಳ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಗ್ಯಾನೇಶ ಕಡಗದ, ಮಹ್ಮದ ರಪೀಕ್, ಪಕೀರಪ್ಪ, ದಾವಲಸಾಬ, ಬಸವರಾಜ, ಬಾಳೇಶ ಅಂಗಡಿ ಇದ್ದರು.