ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂದ ಜಿಲ್ಲಾ ಪದಾಧಿಕಾರಿಗಳು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ ಜಿ.ಹುಲಿಗೆಮ್ಮ, ಮಂಜುನಾಥ ಡಗ್ಗಿ, ಸುಂಕಪ್ಪ ಗದಗ, ಹುಲಿಗೆಮ್ಮ ಹಾಲಳ್ಳಿ, ಮಹಾದೇವಿ ಇದ್ದರು. 
ಕೊಪ್ಪಳ

ವಿಮುಕ್ತ ದೇವದಾಸಿಯರಿಂದ ಪ್ರತಿಭಟನೆ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಗಣತಿಯಲ್ಲಿ ಬಿಟ್ಟವರನ್ನು ಸೇರಿಸಿ
ಕೊಪ್ಪಳ: ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರು ಮತ್ತವರ ಕುಟುಂಬದವರನ್ನು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂದ ಜಿಲ್ಲಾ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ ಮರು ಗಣತಿ ಮಾಡುತ್ತಿದೆ. ಹಿಂದಿನ ಪಟ್ಟಿಯಲ್ಲಿ ಇದ್ದವರು ಮತ್ತವರ ಕುಟುಂಬದವರನ್ನು ಮಾತ್ರ ಪರಿಗಣಿಸುತ್ತಿದೆ. ಆದರೆ, ಹಿಂದಿನ ಗಣತಿಯಲ್ಲೂ ಬಿಟ್ಟು ಹೋದ ದೇವದಾಸಿಯರು ಮತ್ತವರ ಕುಟುಂಬದವರನ್ನು ಪರಿಗಣಿಸಿಲ್ಲ. ಇದರಿಂದ ಅವರಿಗೆ ತುಂಬಾ ಅನ್ಯಾಯವಾಗಲಿದೆ. ಸಾವಿರಾರು ಮಕ್ಕಳು ಸರ್ಕಾರಿ ಸೌಲಭ್ಯ, ಉದ್ಯೋಗ, ಶಿಕ್ಷಣದಿಂದ ವಂಚಿತರಾಗುವರೆಂದು ಅಳಲು ತೋಡಿಕೊಂಡರು.
ಹೊಸ ಕಾಯ್ದೆ ಜಾರಿಯಾಗಲಿದ್ದು ಹಿಂದಿನ ಕಾಯ್ದೆ ಮಾನದಂಡ ಆಧರಿಸಿ ಅರ್ಹತೆ ನಿಗಡಿಪಡಿಸಬೇಡಿ. ವಯೋಮಾನ ಕೇಳದೆ ಅರ್ಜಿ ಸಲ್ಲಿಸಿದವರನ್ನು ಗಣತಿಯಲ್ಲಿ ಪರಿಗಣಿಸಿ. ತಲೆಮಾರುಗಳಿಂದ ಅನಿಷ್ಠ ಪದ್ಧತಿಗೆ ಒಳಗಾದವರನ್ನು ಗಣತಿಯಲ್ಲಿ ಸೇರಿಸಿ. ಅವರು, ಮತ್ತವರ ಮಕ್ಕಳಿಗೆ ಸೌಲಭ್ಯ ನೀಡಬೇಕು. ಮಾಸಾಶನ ಮೊತ್ತ 5 ಸಾವಿರ ರೂ.ಗೆ ಹೆಚ್ಚಿಸಬೇಕು. ಹೊಸ ಯೋಜನೆ ರೂಪಿಸಬೇಕು. ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಕಾರರಾದ ಜಿ.ಹುಲಿಗೆಮ್ಮ, ಮಂಜುನಾಥ ಡಗ್ಗಿ, ಸುಂಕಪ್ಪ ಗದಗ, ಹುಲಿಗೆಮ್ಮ ಹಾಲಳ್ಳಿ, ಮಹಾದೇವಿ, ಸಿದ್ದಮ್ಮ ಹರ್ಲಾಪುರ, ಕೀರಮ್ಮ, ರತ್ನಮ್ಮ ಇತರರಿದ್ದರು.