ಓವರ್ ಲೋಡ್ ಟಿಪ್ಪರ್‌ಗಳ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಗಂಗಾವತಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಗ್ರಾಮಸ್ಥರು ವಾಹನಗಳನ್ನು ತಡೆದು ಗುರುವಾರ ಪ್ರತಿಭಟನೆ ನಡೆಸಿದರು. ವಕೀಲ ಶಿವರಾಜ್ ಡಂಬರ್, ಮುಖಂಡರಾದ ಬೀರಪ್ಪ, ಖಾಜಾವಲಿ, ಎನ್. ವೀರೇಶ, ಷಣ್ಮುಖ ಹತ್ತಿಮರದ ಇತರರಿದ್ದರು.
- ವಡ್ಡರಹಟ್ಟಿಯಲ್ಲಿ ವಾಹನ ನಿಲ್ಲಿಸಿ ಗ್ರಾಮಸ್ಥರ ಪ್ರತಿಭಟನೆ
- ಸರಕು ಚೆಲ್ಲದಂತೆ ಗ್ರೀನ್‌ಮ್ಯಾಟ್ ಅಳವಡಿಸಲು ಒತ್ತಾಯ
ಗಂಗಾವತಿ: ಗ್ರಾಮದಲ್ಲಿ ಸಂಚರಿಸುತ್ತಿರುವ ಟಿಪ್ಪರ್‌ಗಳ ಓವರ್ ಲೋಡ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಗ್ರಾಮಸ್ಥರು ವಾಹನಗಳನ್ನು ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಜಲ್ಲಿ, ಮರಮ್ ಸೇರಿ ಇತರ ಕಟ್ಟಡ ಸಲಕರಣೆಗಳನ್ನು ಹಾಕುತ್ತಿದ್ದು, ರಸ್ತೆಯಲ್ಲೆಲ್ಲ ಚೆಲ್ಲಾಡುತ್ತಿವೆ. ಇದರಿಂದ ಅಪಘಾತ ಪ್ರಮಾಣ ಹೆಚ್ಚುತ್ತಿದ್ದು, ದ್ವಿಚಕ್ರ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ರೋಸಿಹೋದ ಗ್ರಾಮಸ್ಥರು ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದರಿಂದ ಕೆಲಕಾಲ ಗದ್ದಲ ನಡೆಯಿತು. ಕಂದಾಯ ನಿರೀಕ್ಷಕ
ಮಹೇಶ ದಲಾಲ್ ಆಗಮಿಸಿ ವಾಹನಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು. ಟೋಲ್ ಏಜೆನ್ಸಿಯರನ್ನು ಸ್ಥಳಕ್ಕೆ ಕರೆಯಿಸಿ ರಸ್ತೆ ತುಂಬೆಲ್ಲ ಬಿದ್ದಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಲಾಯಿತು.
ವಕೀಲ ಶಿವರಾಜ ಡಂಬರ್ ಮಾತನಾಡಿ, ಜಲ್ಲಿ, ಮರಂ ಸಾಗಣೆ ಮಾಡುವ ಟಿಪ್ಪರ್‌ಗಳು ನಿಯಮ ಮೀರಿ ಓವರ್ ಲೋಡ್ ಮಾಡಿಕೊಂಡು ಸಂಚರಿಸುತ್ತಿವೆ. ಜನರ ಓಡಾಟ, ವಾಹನ ಸಂಚಾರ ಹೆಚ್ಚಿರುವ ಗ್ರಾಮದಲ್ಲಿ ವೇಗ ಮಿತಿ ಇಲ್ಲದೇ ಟಿಪ್ಪರ್‌ಗಳು ರಭಸವಾಗಿ ಸಂಚಾರ ಮಾಡುತ್ತಿವೆ. ಓವರ್ ಲೋಡ್‌ನಿಂದ ರಸ್ತೆಯಲ್ಲೆಲ್ಲ ಜಲ್ಲಿಕಲ್ಲು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಾಗಿಲ್ಲ. ಇದನ್ನು ಆರ್‌ಒ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದ್ದ, ಕ್ರಷರ್, ಟಿಪ್ಪರ್ ಮಾಲೀಕರಿಗೆ ನಿಯಮ ಪಾಲನೆಗೆ ನೋಟಿಸ್ ಜಾರಿ ಮಾಡಬೇಕು. ಓವರ್ ಲೋಡ್ ತಡೆಯಬೇಕು. ವಾಹನಗಳಿಂದ ವಸ್ತುಗಳು ಬೀಳದಂತೆ ತಾಡಪಾಲ್ ಅಥವಾ ಗ್ರೀನ್ ನೆಟ್ ಅಳವಡಿಸುವ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಬೀರಪ್ಪ, ಖಾಜಾವಲಿ, ಎನ್. ವೀರೇಶ, ಷಣ್ಮುಖ ಹತ್ತಿಮರದ, ಕೇಶಪ್ಪ, ದುರಗಪ್ಪ, ಹವಳೆ ಮಂಜುನಾಥ, ಕಿರಣ್ ಕುಮಾರ್, ಹನುಮೇಶ, ಮುರ್ತುಜಾಸಾಬ್, ಬಾಪುಸಾಬ್, ಹುಸೇನ್, ರಾಜಾಸಾಬ್ ಗುಮಗೇರಿ ಇತರರಿದ್ದರು.